ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಕೆಲಸಕ್ಕೆಂದು ಹೊರಟಿದ್ದ ಬೈಕ್ ಸವಾರನ ಮೇಲೆ ಮರ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಕುಕ್ಕನಹಳ್ಳಿಯ ನಿವಾಸಿ ನರಸಿಂಹಮೂರ್ತಿ (55) ಮೃತ ವ್ಯಕ್ತಿ. ಅ.12 ರಂದು ಕೆಲಸಕ್ಕೆಂದು ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಹೆಸರಘಟ್ಟದ ತೋಟಗೆರೆಯ ಬಳಿ ಬೃಹತ್ ಆಲದ ಮರ ಆತನ ಮೇಲೆ ಬಿದ್ದಿತ್ತು.

ಗಂಭೀರವಾಗಿ ಗಾಯಾಗೊಂಡಿದ್ದ ಇವರನ್ನು ಹೆಸರಘಟ್ಟದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 18 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ನರಸಿಂಹಮೂರ್ತಿ ಬಡ ಕುಟುಂಬದವರಾಗಿ, ಅವರ ಸಾವಿನಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇತ್ತ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೂ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಇನ್ಸ್ಪೆಕ್ಟರ್ ನಂದೀಶ್ ಸಾವಿನ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ