ನೆಲಮಂಗಲ : ಬೈಕ್ ಕಳ್ಳತನ ಮಾಡಿ, ಬಳಿಕ ಅಗತ್ಯವಿರುವವರಿಂದ ಆರ್ಡ್ರ್ ತೆಗೆದುಕೊಂಡು ಪ್ರೊಫೆಶನಲ್ ಆಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಖದೀಮರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿಕುಮಾರ್ (21), ಮುನಿರಾಜು ಯಾನೆ ಗುಂಡ (20), ಜಗದೀಶ್ ಯಾನೆ ಜಗ್ಗಿ (21), ಮೋಹನ್ ಕುಮಾರ್ (22) ಮತ್ತು ಶಿವಶಂಕರ್ (25) ಬಂಧಿತ ಆರೋಪಿಗಳು. ಇವರು ಕೆಟಿಎಂ, ಪಲ್ಸರ್, ಬುಲೆಟ್, ಯಮಹಾ ಆರ್ಎಕ್ಸ್ನಂತಹ ದುಬಾರಿ ಬೆಲೆಯ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ 46 ಬೈಕ್ಗಳನ್ನು ಕದ್ದು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಕಳೆದ ಡಿಸೆಂಬರ್‌ನಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ವಿಶೇಷ ತಂಡ ರಚಸಿ ಪ್ರಕರಣಗಳ ತನಿಖೆಗಿಳಿದ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ರವಿಕುಮಾರ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೈಕ್ ಕದ್ದು ಮಾರುತ್ತಿದ್ದರು : ಬೆಂಗಳೂರಿನ ಡಿಕೆನ್‌ಸನ್ ರಸ್ತೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಿವಶಂಕರ್ , ಸಹದ್ಯೋಗಿ ಲಿಖಿತ್‌ನ ಮೂಲಕ ರವಿಕುಮಾರ್ ಎಂಬಾನಿಗೆ ಪರಿಚಯವಾಗಿದ್ದ. ಶಿವಶಂಕರ್ ಡಿಟೆಕ್ವಿವ್ ಕೆಲಸ ಮಾಡಲು ನಂಬರ್ ಪ್ಲೇಟ್‌ಗಳಿಲ್ಲದ ವಿವಿಧ ಕಂಪನಿಗಳ ದ್ವಿಚಕ್ರವಾಹನಗಳು ಬೇಕಿರುವುದಾಗಿ ರವಿಕುಮಾರ್‌ಗೆ ತಿಳಿಸಿದ್ದ. ಅಲ್ಲದೆ, ತನಗೆ ಬೇಕಾದ ಬೈಕ್‌ಗಳ ಫೋಟೋ ತೆಗೆದು ಅವುಗಳು ಇರುವ ಲೊಕೇಷನ್ ಸಮೇತ ರವಿಕುಮಾರ್‌ಗೆ ಮಾಹಿತಿ ನೀಡಿದ್ದ.
ಓದಿ : ಬೆಳಗಾವಿಯಲ್ಲಿ ಕೊಲೆಗೆ ಯತ್ನಿಸಿದ ಆರೋಪಿಗೆ ಕಠಿಣ ಜೈಲು ಶಿಕ್ಷೆ
ಸ್ನೇಹಿತ ಶಿವಶಂಕರ್ಗಾಗಿ ಬೈಕ್ ಕದಿಯಲು ಪ್ಲಾನ್ ಮಾಡಿದ ರವಿಕುಮಾರ್, ಇತರ ಸ್ನೇಹಿತರಾದ ಜಗದೀಶ್, ಮುನಿರಾಜು ಮತ್ತು ಮೋಹನ್‌ಕುಮಾರ್ ಎಂಬವರೊಂದಿಗೆ ಸೇರಿ ರಾತ್ರಿಯ ವೇಳೆ ಬೈಕ್ ಕಳವು ಮಾಡುತ್ತಿದ್ದರು. ಬಳಿಕ ಅವುಗಳನ್ನು ಗ್ರಾಹಕರಿಗೆ ಮಾರುತ್ತಿದ್ದರು.
ಮಾರಾಟ ಹೇಗೆ? ಲಾಕ್ ಡೌನ್ ಸಮಯದಲ್ಲಿ ನಮ್ಮ ಫೈನಾನ್ಸ್ನಲ್ಲಿ ಸೀಝ್ ಆಗಿರುವ ಕೆಲವೊಂದು ಬೈಕ್ಗಳು ಇವೆ. ಅವುಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಗ್ರಾಹಕರನ್ನು ಸೆಳೆಯುತ್ತಿದ್ದ ಖದೀಮರ ಗ್ಯಾಂಗ್, ಅಗತ್ಯ ಇರುವವರಿಂದ ಆರ್ಡರ್ ತೆಗೆದುಕೊಂಡು ಮಾರಾಟ ಮಾಡುತ್ತಿದ್ದರು. ಗ್ರಾಹಕರು ವಾಹನ ದಾಖಲೆ ಕೇಳಿದರೆ, ನಂತರ ಕೊಡುವುದಾಗಗಿ ನಂಬಿಸುತ್ತಿದ್ದರು. ಇವರ ಬಗ್ಗೆ ತಿಳಿಯದ ಜನ ಕಡಿಮೆ ಬೆಲೆಗೆ ಸಿಕ್ಕಿತ್ತಲ್ಲ ಎಂದು ಬೈಕ್ ಖರೀದಿಸುತ್ತಿದ್ದರು.
ಕದ್ದ ಬೈಕ್ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಖದೀಮರು ಐಶಾರಾಮಿ ಜೀವನ ನಡೆಸುತ್ತಿದ್ದರು.