ಹೊಸಕೋಟೆ: ಶತಮಾನದಲ್ಲೇ ಇಂತಹ ಭೀಕರ ಪ್ರವಾಹವನ್ನು ನಾನು ನೋಡಿರಲಿಲ್ಲ. ಆದಕಾರಣ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಸಂಸದ ಬಚ್ಚೇಗೌಡ ಕೇಂದ್ರಕ್ಕೆ ಮನವಿ ಮಾಡಿದರು.
ಹೊಸಕೋಟೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಚ್ಚೇಗೌಡ, ಪ್ರವಾಹದಲ್ಲಿ ಹಲವು ಸೇತುವೆ, ರಸ್ತೆಗಳು ಕೊಚ್ಚಿಹೋಗಿವೆ. ಮನೆಗಳು, ಶಾಲೆಗಳು ಹಾಳಾಗಿದ್ದು, ಇವುಗಳನ್ನು ಸರಿಪಡಿಸಲು ಹೆಚ್ಚು ಹಣ ಬೇಕಾಗಿದೆ. ಕೇಂದ್ರ ಸರ್ಕಾರ ಕೂಡಲೇ 10 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ನೆರೆ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಹೇಳಿದರು.
ಕೇಂದ್ರ ನೆರೆ ಅಧ್ಯಯನ ತಂಡ ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಮುಂದೆ ನೆರೆ ಪ್ರದೇಶಕ್ಕೆ ಇನ್ನು ಹೆಚ್ಚಿನ ಹಣ ಬಿಡುಗಡೆಯಾಗಲಿದೆ ಎಂದರು.
ಸಚಿವ ಸಂಪುಟ ವಿಚಾರ :
ಎಲ್ಲರಿಗೂ ಆಸೆ ಇರುತ್ತೆ. ನನಗೂ ಕೇಂದ್ರದಲ್ಲಿ ಸಚಿವನಾಗುವ ಆಸೆ ಇದೆ. ಅದೇ ರೀತಿ ಕೆಲವರಿಗೆ ಇಂತಹ ಖಾತೆ ಕೊಟ್ಟಿದ್ರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ. ಇಲ್ಲಿ ಯಾವ ಅಸಮಾಧಾನವು ಇಲ್ಲ. ಎಲ್ಲವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ತಿಳಿಸಿದರು.