ದೇವನಹಳ್ಳಿ : ನಾಳೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಕೆ ವಿಮಾನಗಳ ಆಗಮನದ ಹಿನ್ನೆಲೆ ಆರೋಗ್ಯ ಸಚಿವ ಸುಧಾಕರ್ ಕೆಐಎಎಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು, ನಾಳೆ ಬೆಳಗ್ಗೆ ನಾಲ್ಕು ಗಂಟೆಗೆ ಯುಕೆಯಿಂದ ಮೊದಲ ವಿಮಾನದಲ್ಲಿ ಸುಮಾರು 330 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬರುವ ಎಲ್ಲ ಯುಕೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುವುದು. ಯುಕೆಯಿಂದ ರಿಪೋರ್ಟ್ ತಂದಿದ್ದರು ರಾಜ್ಯಕ್ಕೆ ಬಂದಾಗ ನಿಲ್ದಾಣದಲ್ಲಿ ಟೆಸ್ಟ್ ಮಾಡಿಸೋದು ಸಹ ಕಡ್ಡಾಯವಾಗಿದೆ.
ಪಾಸಿಟಿವ್ ಬಂದ್ರೆ ಆರೋಗ್ಯ ಇಲಾಖೆ ಗುರುತಿಸಿರುವ ಸಂಸ್ಥೆಗಳಲ್ಲಿ ಕ್ವಾರಂಟೈನ್ ಆಗಬೇಕು. ಯುಕೆಯಿಂದ ಬರುವ ಪ್ರಯಾಣಿಕರು ಕಠಿಣ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ. ಯುಕೆ ಪ್ರಯಾಣಿಕರಿಗೆ ಕೈ ಮೇಲೆ ಸೀಲ್ ಹಾಕಲಾಗುತ್ತೆ. ನೆಗೆಟಿವ್ ಬಂದರೆ 14 ದಿನ ಮನೆಯಲ್ಲಿ ಹೋಂ ಕ್ವಾರಂಟೈನ್ ಇರಬೇಕು.
ಎಲ್ಲ ಪ್ರಯಾಣಿಕರಿಗೆ ಉಚಿತವಾಗಿ ವಿಮಾನ ನಿಲ್ದಾಣದಲ್ಲೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಇಲ್ಲಿ ಟೆಸ್ಟ್ ಮಾಡಿ ನೆಗೆಟಿವ್ ಬಂದವರ ಮೇಲೆಯೂ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗುವುದು ಎಂದರು.