ದೊಡ್ಡಬಳ್ಳಾಪುರ: ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಅವರು ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುವಾಗ, ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆ ಕೊಡಲು ರಾಜಕೀಯ ಒತ್ತಡ ಕಾರಣವೇ ಎಂದು ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಚನ್ನಣ್ಣನವರ್, ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆಯನ್ನು ಅವರು ಬಿಟ್ಟಿದ್ದು ದೊಡ್ಡ ನಷ್ಟವಾಗಿದೆ. ಅಂತವರು ಬಹಳ ಅಪರೂಪ, ನನ್ ಬಗ್ಗೆ ನೀವು ಎಷ್ಟು ಮಾತನಾಡುತ್ತೀರೋ, ಅದರ ಶೇಕಡಾ 10ರಷ್ಟು ಮಾತ್ರ ಇದ್ದೇನೆ ಎಂದರು.
ಅಣ್ಣಾಮಲೈ ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ. ಅಂತಿಮವಾಗಿ ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ. ನಾನೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಂದುಕೊಳ್ಳಬೇಡಿ. ಸದ್ಯ ನಾನು ಫುಲ್ ಫಾರ್ಮ್ನಲ್ಲಿದ್ದೇನೆ. ಐಪಿಎಸ್ ಮತ್ತು ಐಎಎಸ್ ಹುದ್ದೆಗಳಿಂದ ಸಾವಿರಾರು ಜನರಿಗೆ ಸಹಾಯ ಮಾಡಬಹುದು. ಈ ಹುದ್ದೆಯಲ್ಲಿದ್ದು ನಾನು ಜನಕ್ಕೆ ಸಹಾಯ ಮಾಡುವುದಾಗಿ ಚನ್ನಣ್ಣನವರ್ ಹೇಳಿದರು.