ದೊಡ್ಡಬಳ್ಳಾಪುರ: ಲಾಕ್‌ಡೌನ್ ಸಮಯದಲ್ಲಿ ನೇಕಾರಿಕೆ ಉದ್ಯಮ ನೆಲಕ್ಕಚ್ಚಿದೆ. ನೇಕಾರರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ.ಇಂಥ ಸಂದರ್ಭದಲ್ಲಿ ಸ್ಪಂದಿಸಿರುವ ಸರ್ಕಾರ, ನೇಕಾರ ಸನ್ಮಾನ್ ಯೋಜನೆ ಮೂಲಕ 2 ಸಾವಿರ ರೂಪಾಯಿ ಧನಸಹಾಯ ನೀಡುತ್ತಿದೆ.
ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಂಜನಾದ್ರಿ ಚಾರಿಟೆಬಲ್ ಟ್ರಸ್ಟ್ ಕಚೇರಿ ತೆರೆದು ಉಚಿತವಾಗಿ ನೇಕಾರ ಸನ್ಮಾನ್ ಯೋಜನೆಗೆ ಆನ್ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.
ಈ ಬಗ್ಗೆ ಮಾತನಾಡಿದ ಟ್ರಸ್ಟ್ ಮುಖಂಡ ಧೀರಜ್ ಮುನಿರಾಜು, ಲಾಕ್‌ಡೌನ್‌ನಿಂದ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರು ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಅವರಿಗೆ ಸರ್ಕಾರಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಪೂರ್ಣ ಮಾಹಿತಿ ಇರುವುದಿಲ್ಲ. ಈ ಕುರಿತಾಗಿ ಮಾಹಿತಿ ಇದ್ದರೂ ಅರ್ಜಿ ಹಾಕುವ ವಿಧಾನ ಗೊತ್ತಿರುವುದಿಲ್ಲ. ಹೀಗಾಗಿ ಅವರ ನೆರವಿಗೆ ಕಚೇರಿ ತೆರೆಯಲಾಗಿದೆ. ಇಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಲು ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಇದಕ್ಕಾಗಿ ನಾಲ್ಕು ಜನ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ನೇಕಾರರು ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ತಾಲೂಕಿನ ಹೋಬಳಿ ಮಟ್ಟದಲ್ಲೂ ಕಚೇರಿಗಳನ್ನು ತೆರೆಯಲಾಗುತ್ತದೆ ಎಂದರು.