ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರಿಂದ ತೀವ್ರ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ರಾಜ್ಯದಲ್ಲೇ ಮೊದಲ ಬಾರಿಗೆ ತನಿಖೆ ವೇಳೆ ಹತ್ಯೆ ಮಾಡಲಾದ ಭ್ರೂಣ ಪತ್ತೆಯಾಗಿದೆ. ಹೊಸಕೋಟೆಯ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ 14 ರಿಂದ 16 ವಾರಗಳ ಭ್ರೂಣ ಸಿಕ್ಕಿದೆ.
ರಾಜ್ಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ರಾಜ್ಯಾದ್ಯಂತ ಭ್ರೂಣ ಹತ್ಯೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ದೇವನಹಳ್ಳಿಯ ವಿವಿಧ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಈ ವೇಳೆ ಹೊಸಕೋಟೆಯ ಚನ್ನಸಂದ್ರದಲ್ಲಿರುವ ಈ ಆಸ್ಪತ್ರೆಯ ಮೇಲೆ ದಾಳಿ ಮಾಡಿದಾಗ ಈ ಭ್ರೂಣ ಪತ್ತೆಯಾಗಿದೆ. ಇದು ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರೂಣ ಪತ್ತೆಯಾದ ಮೊದಲ ಕೇಸ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳ ತಂಡ ಆಸ್ಪತ್ರೆ ಮೇಲೆ ದಾಳಿ ಮಾಡಿದ ನಂತರ ಆಸ್ಪತ್ರೆ ಮಾಲೀಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಸಂಪೂರ್ಣ ಸಹಕಾರ ನೀಡಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿ ಆಸ್ಪತ್ರೆಯ ಯಾವುದೇ ಸಿಬ್ಬಂದಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆಸ್ಪತ್ರೆಯನ್ನು ಸೀಜ್ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ಓರ್ವನ ಬಗ್ಗೆ ಮಾಹಿತಿ ದೊರಕಿದೆ. ಆದರೆ ಪ್ರಕರಣ ತನಿಖೆಯಲ್ಲಿ ಇರುವುದರಿಂದ ನಾವು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಸುನೀಲ್ ಕುಮಾರ್ ಹೇಳಿದ್ದಾರೆ.
ಪ್ರಕರಣವನ್ನು ಸಿಐಡಿಗೆ ವಹಿಸಿರುವ ಸರ್ಕಾರ: ರಾಜ್ಯಾದ್ಯಂತ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಮೈಸೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲೂ ಇದರ ಜಾಲ ಹರಡಿಕೊಂಡಿರುವುದು ಬಯಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಐಡಿ ತನಿಖೆಗೆ ವಹಿಸಿದೆ.
ಹಾಡ್ಯ ಗ್ರಾಮಕ್ಕೆ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ, ಪರಿಶೀಲಿಸಿದ್ದರು. ಅಲ್ಲದೆ, ಇಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.
ಇದನ್ನೂ ಓದಿ: ಭ್ರೂಣ ಪತ್ತೆ, ಭ್ರೂಣ ಹತ್ಯೆ ಪ್ರಕರಣ: ಮೈಸೂರಿನಲ್ಲಿ ಮತ್ತೊಬ್ಬ ಮಹಿಳಾ ನರ್ಸ್ ಸಿಐಡಿ ವಶಕ್ಕೆ