ದೊಡ್ಡಬಳ್ಳಾಪುರ (ಬೆಂ.ಗ್ರಾ): ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಸೇರಿ ಇತರರ ಮೇಲೆ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ಗೆ ದೂರು ನೀಡಿದವನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಕಟ್ಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದ ರಂಗಸ್ವಾಮಯ್ಯಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ದೂರು ದಾಖಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ ಪತಿ ಸಿ.ಕೆ ಪ್ರಕಾಶ್ ವಿರುದ್ಧ ಜೀವ ಬೆದರಿಕೆಯ ಆರೋಪ ಕೇಳಿಬಂದಿದೆ. ಚನ್ನವೀರನಹಳ್ಳಿಯ ಸಿ.ಕೆ ಪ್ರಕಾಶ್ ಸೇರಿದಂತೆ 5 ಮಂದಿ ಗ್ರಾಮದಲ್ಲಿನ 18 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದರು. ಇದರ ವಿರುದ್ಧ ಇದೇ ಗ್ರಾಮದ ರಂಗಸ್ವಾಮಯ್ಯ ಒತ್ತುವರಿ ಜಾಗ ತೆರವು ಮಾಡಿಸುವಂತೆ ತಹಶೀಲ್ದಾರ್ಗೆ ಮನವಿ ಮಾಡಿದ್ದರು.
ಮನವಿ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಭೂಮಾಪನ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿ ಒತ್ತುವರಿ ಜಾಗ ಸರ್ವೆ ಮಾಡಲು ಬಂದಿದ್ದರು. ಇದರಿಂದ ಕುಪಿತನಾದ ಪ್ರಕಾಶ್ ರಂಗಸ್ವಾಮಯ್ಯನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ಕುರಿತು ರಂಗಸ್ವಾಮಯ್ಯ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗ್ರಾ.ಪಂ ಸದಸ್ಯೆಯ ಪತಿ ಹೇಳುವುದೇ ಬೇರೆ!
ರಂಗಸ್ವಾಮಯ್ಯರವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಕೆ ಪ್ರಕಾಶ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ದಿನದಿಂದ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ, ಗ್ರಾಮದ ಹೊರಗೆ ಕ್ರಷರ್ ಇದ್ದು ಅವರಿಂದ ಹಣ ಕೊಡಿಸುವಂತೆ ನನಗೆ ಹೇಳಿದರು, ಆದರೆ ನಾನು ನಿರಾಕರಿಸಿದೇ, ಇದೇ ವೇಳೆ ಲೋಕೋಪಯೋಗಿ ಇಲಾಖೆಯಿಂದ ಗ್ರಾಮದಲ್ಲಿ ಚರಂಡಿ ಕೆಲಸ ಮಾಡಿಸಲು ಹಣ ಬಿಡುಗಡೆಯಾಗಿದ್ದು, ಕ್ರಷರ್ ಅವರಿಂದ ಹಣ ತೆಗೆದುಗೊಂಡು ಚರಂಡಿ ಕಾಮಾಗಾರಿ ಮಾಡಿಸುತ್ತೀಯಾ ಎಂದು ತನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ತನ್ನ ಪತ್ನಿಯನ್ನ ನಿಂದಿಸಿದ್ದಕ್ಕೆ ಕೋಪದಲ್ಲಿ ಮಾತನಾಡಿದ್ದು ನಿಜ, ಇದಕ್ಕೆ ನಾನು ಕ್ಷಮೆ ಕೊರುವೆ, ನಾನೇ ನಿಂತು ಒತ್ತುವರಿ ಜಾಗವನ್ನು ತೆರವು ಮಾಡಿಸುವ ಕೆಲಸ ಮಾಡಿಸುತ್ತಿದ್ದೆ. ಆದರೆ ನನ್ನ ವಿರುದ್ಧ ದ್ವೇಷ ಸಾಧಿಸುವ ಕಾರಣಕ್ಕೆ ರಂಗಸ್ವಾಮಯ್ಯ ಮೂರನೇ ವ್ಯಕ್ತಿಯ ಮಾತು ಕೇಳಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ: ಸೂಪರ್ ಕಾಪ್ ಆಗಲು ವಾಜೆ ಖತರ್ನಾಕ್ ಐಡಿಯಾ!