ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಲಿಂದಲೇ ಮತದಾರರ ಮನವೊಲಿಸಿ, ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ವಿವಿಧ ಪಕ್ಷಗಳ ನಾಯಕರು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಯುಗಾದಿ ಹಬ್ಬದ ಹೆಸರಲ್ಲಿ ಪ್ರಮುಖ ಪಕ್ಷಗಳ ನಾಯಕರ ಬೆಂಬಲಿಗರು ಹಬ್ಬದ ಕಿಟ್ಗಳನ್ನು ಹಂಚಿಕೆ ಮಾಡಲು ಮುಗಿಬಿದ್ದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಾ ಮುಂದು, ತಾ ಮುಂದು ಎಂದು ಯುಗಾದಿ ಹಬ್ಬದ ಕಿಟ್ಗಳನ್ನು ಕ್ಷೇತ್ರದ ಜನತೆಗೆ ವಿತರಣೆ ಮಾಡುತ್ತಾ, ತಮ್ಮ ನಾಯಕರ ಪರವಾಗಿ ಭರ್ಜರಿ ಮತಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೂ ಅಡುಗೆ ಎಣ್ಣೆ, ಬೆಲ್ಲ, ತೊಗರಿ ಬೆಳೆ, ಮೈದಾ ಹಿಟ್ಟು ಒಳಗೊಂಡ ಕಿಟ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಕ್ಷಗಳು ಈ ರೀತಿ ಕಿಟ್ ಹಂಚಿಕೆ ಮಾಡುತ್ತಿರುವ ಬಗ್ಗೆ ಎಎಪಿ ಖಂಡನೆ ವ್ಯಕ್ತಪಡಿಸಿದೆ.
ರಾಜ್ಯದ ಜನ ಆಮಿಷಗಳಿಗೆ ಬಲಿಯಾಗುವುದನ್ನು ಬಿಡಬೇಕು: ಎಎಪಿ ಮುಖಂಡ ಪುರುಷೋತ್ತಮ್ ಮಾತನಾಡಿ, ಕೆಲ ಪಕ್ಷದ ನಾಯಕರ ಬೆಂಬಲಿಗರು ಪ್ರತಿ ಹಳ್ಳಿಗಳಿಗೂ ತೆರಳಿ ಹಬ್ಬದ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಆದರೆ ಕೆಲ ಕಡೆ ಜನರು ಕಿಟ್ಗಳನ್ನು ತಂದು ರಸ್ತೆಗೆ ಸುರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಇದೇ ರೀತಿ ಎಲ್ಲರೂ ಮಾಡಬೇಕು, ರಾಜ್ಯದ ಜನ ಆಮಿಷಗಳಿಗೆ ಬಲಿಯಾಗಬಾರದು, ಇಲ್ಲದಿದ್ದರೆ ರಾಜಕಾರಣಿಗಳ ಮನೆ ಮುಂದೆ ಕೆಲಸ ಮಾಡಿಸಿಕೊಳ್ಳಲು ಬೇಡುವಂತಾಗುತ್ತದೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದರು.
ಇದನ್ನೂ ಓದಿ:ಆರು ತಿಂಗಳು ಕಾಮಗಾರಿ ಬಾಕಿ ಇರೋ ಮೆಟ್ರೋ ಮಾರ್ಗ ಉದ್ಘಾಟನೆ ಅಗತ್ಯವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬ್ರಿಜೇಶ್ ಕಾಳಪ್ಪ: ಬಿಜೆಪಿ ಸರ್ಕಾರ ಬೆಂಗಳೂರು - ಮೈಸೂರು ಹೆದ್ದಾರಿಯನ್ನು ತನ್ನ ಸಾಧನೆಯೆಂದು ಬಿಂಬಿಸಿಕೊಳ್ಳುವುದಾದರೆ, ಟೋಲ್ ರದ್ದುಪಡಿಸಿ ಪೂರ್ತಿ ಹಣವನ್ನು ಸರ್ಕಾರವೇ ಭರಿಸಲಿ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ್ದ ಅವರು, ಬೆಂಗಳೂರು - ಮೈಸೂರು ನಡುವೆ ನೂತನವಾಗಿ ನಿರ್ಮಿಸಿರುವ ಹೆದ್ದಾರಿಯನ್ನು ಬಿಜೆಪಿ ನಾಯಕರು ದಶಪಥವೆಂದು ಕರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ದಶಪಥ ಎಂದು ಕರೆಯುವುದನ್ನು ಎಲ್ಲೂ ನಿರಾಕರಣೆ ಮಾಡಿಲ್ಲ. ಆದರೆ ಎನ್‌ಹೆಚ್‌ಎಐ ಹೊರಡಿಸಿರುವ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಆರು ಪಥವೆಂದು ಉಲ್ಲೇಖಿಸಲಾಗಿದೆ. ಹತ್ತು ಪಥವನ್ನು ಆರು ಪಥ ಮಾಡಲಾಗಿದ್ದು, ಉಳಿದ 4 ಪಥಗಳು ಎಲ್ಲಿ ಹೋದವು. ಬಿಜೆಪಿ ಸರ್ಕಾರವು 40% ಕಮಿಷನ್ ಪಡೆಯುವಂತೆ 4 ಪಥಗಳನ್ನು ಕೂಡ ಇಲ್ಲವಾಗಿಸಿದೆ. ಇದು ದಶಪಥವೋ ಆರು ಪಥವೋ ಎಂಬ ಬಗ್ಗೆ ಸರ್ಕಾರ ಹಾಗೂ ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಎನ್‌ಹೆಚ್‌ಎಐ ಆಹ್ವಾನ ಪತ್ರಿಕೆಯ ಪ್ರಕಾರ, ಬೆಂಗಳೂರಿನಿಂದ ನಿಡಘಟ್ಟ ತನಕ ಮಾತ್ರ ಕಾಮಗಾರಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ 140 ಕಿಲೋಮೀಟರ್ ಇದ್ದು, ಸರ್ಕಾರವು ಕೇವಲ ನಿಡಘಟ್ಟದ ತನಕ 70 ಕಿಲೋಮೀಟರ್ ಮಾತ್ರ ಹೆದ್ದಾರಿ ಮಾಡಿಸಿ ಪ್ರಧಾನಿಯಿಂದ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ? ಎಂದು ಬಿಜೆಪಿ ನಾಯಕರು ಹೇಳಬೇಕು. ಪ್ರಧಾನಮಂತ್ರಿಗೆ ಇದು ಶೋಭೆ ತರುತ್ತದೆಯೇ? ಎಂದು ಅವಲೋಕಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದರು.