ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಮನೆಯಲ್ಲಿ ಇದ್ದದ್ದೇ ಒಂದು ಮೊಬೈಲ್, ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್ ಬಳಸ್ತಾ ಇದ್ರು. ಚಾರ್ಚಿಂಗ್ ಹಾಕಿದ ಮೊಬೈಲ್ ನೋಡುತ್ತಿದ್ದ ಮಗಳಿಗೆ ಮೊಬೈಲ್ ಬಳಸಬೇಡ ಅಂತಾ ತಂದೆ ಗದರಿಸಿದ್ದಕ್ಕೆ ಮುಂಗೋಪಿಯಾಗಿದ್ದ ಮಗಳು ಮನನೊಂದು ನೇಣಿಗೆ ಶರಣಾಗಿದ್ದಾಳೆ. ದೊಡ್ಡಬಳ್ಳಾಪುರ ನಗರ ಹೊರವಲಯ ಮಾದಗೊಂಡನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ.
ನಗರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ 19 ವರ್ಷದ ಜಯಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನರಸಪ್ಪ ಮತ್ತು ಜಯಲಕ್ಷ್ಮಮ್ಮ ದಂಪತಿಗೆ ಮೂವರು ಮಕ್ಕಳು, ಮೃತ ಜಯಲಕ್ಷ್ಮಿ ಎರಡನೇ ಮಗಳು. ಸ್ವಭಾವದಲ್ಲಿ ಮುಂಗೋಪಿಯಾಗಿದ್ದ ಜಯಲಕ್ಷ್ಮಿಗೆ ಬುದ್ಧಿ ಮಾತು ಹೇಳಿದ್ರೆ ಕೇಳುತ್ತಿರಲಿಲ್ಲವಂತೆ.
ಹಿರಿಯ ಮಗಳಿಗೆ ಮದುವೆ ಫಿಕ್ಸ್ ಆಗಿದ್ದು, ಭಾನುವಾರ ಮಧ್ಯಾಹ್ನ ಸಮಯಕ್ಕೆ ಮದುವೆ ಖರ್ಚಿಗೆ ಹಣ ಕೊಡುವವರು ಫೋನ್ ಮಾಡುವರಿದ್ದರು. ಆದರೆ, ಮೊಬೈಲ್ನಲ್ಲಿ ಚಾರ್ಜ್ ಖಾಲಿಯಾದ ಪರಿಣಾಮ ಕರೆ ಸ್ವೀಕರಿಸುವ ಉದ್ದೇಶದಿಂದ ಮೊಬೈಲ್ ಚಾರ್ಜಿಂಗ್ಗೆ ಹಾಕಿದ್ರು. ಚಾರ್ಜ್ ಆಗುತ್ತಿದ್ದ ಮೊಬೈಲ್ ನ್ನು ಜಯಲಕ್ಷ್ಮಿ ಬಳಕೆ ಮಾಡಲು ಮುಂದಾಗಿದ್ದಾಳೆ. ಇದರಿಂದ ಕೋಪಗೊಂಡ ತಂದೆ ನರಸಪ್ಪ ಮೊಬೈಲ್ ಬಳಕೆ ಮಾಡಬೇಡ ಎಂದು ಗದರಿಸಿದ್ದಾರೆ.
ಇಷ್ಟಕ್ಕೇ ಕೋಪಗೊಂಡ ಜಯಲಕ್ಷ್ಮಿ, ಮೊಬೈಲ್ ಒಡೆದು ಹಾಕಿ ಮನೆಗೆ ಚಿಲಕ ಹಾಕಿ ಹೊರಗೆ ಹೋಗಿದ್ದಾಳೆ. ಮಧ್ಯಾಹ್ನದಿಂದ ಇಡೀ ರಾತ್ರಿ ಜಯಲಕ್ಷ್ಮಿಗಾಗಿ ಪೋಷಕರು ಹುಡುಕಾಡಿದ್ದಾರೆ. ಆದರೆ, ಆಕೆಯ ಪತ್ತೆಯೇ ಆಗಿಲ್ಲ. ಸಂಬಂಧಿಕರ ಮನೆಗೆ ಹೋಗಿರಬೇಕು ಎಂದು ಮನೆಯವರೆಲ್ಲ ಸುಮ್ಮನಾಗಿದ್ದಾರೆ.
ಪೋಷಕರಿಗೆ ಸೋಮವಾರ ಬೆಳಗ್ಗೆ ಎದ್ದ ತಕ್ಷಣವೇ ಮಗಳ ಸಾವಿನ ಸುದ್ದಿ ಮನೆಯ ಬಾಗಿಲಿಗೆ ಬಂದಿದೆ. ಮಾದಗೊಂಡನಹಳ್ಳಿಯ ನಿರ್ಜನ ಪ್ರದೇಶದ ಜಾಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಜಯಲಕ್ಷ್ಮಿಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಕೆಯ ಸಾವಿನ ಬಗ್ಗೆ ಈಗ ಸಂಶಯ ವ್ಯಕ್ತವಾಗಿದೆ.
ಇದನ್ನೂ ಓದಿ: ಕಸದ ಲಾರಿಗಳ ಅನಾಹುತ ಪ್ರಕರಣಗಳಲ್ಲಿ ಚಾಲಕರ ತಪ್ಪಿಲ್ಲ; ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ