ಬೆಂಗಳೂರು: ಟೊಮೆಟೊ ಗಿಡ ಸಾಮಾನ್ಯವಾಗಿ ಬೆಳೆಯೋದು 4 ರಿಂದ 5 ಅಡಿ, ಆದರೆ ಪಾಲಿಹೌಸ್ ನಲ್ಲಿನ ಟೊಮೆಟೊ ಗಿಡಗಳು ಬರೋಬ್ಬರಿ 10 ಅಡಿ ಎತ್ತರ ಬೆಳೆದಿವೆ. ಮಳೆಗಾಲದಲ್ಲಿ ಅಧಿಕ ಇಳುವರಿಗಾಗಿ ಈ ಪದ್ಧತಿಯನ್ನ ಬಳಸಲಾಗುತ್ತಿದೆ.
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆ ಅವರಣದಲ್ಲಿ ನಡೆಯುತ್ತಿರುವ ತೋಟಗಾರಿಕೆ ಮೇಳದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿನ ಹೊಸ ಅವಿಷ್ಕಾರಗಳ ಪ್ರದರ್ಶನಕ್ಕೆ ಇಡಲಾಗಿದ್ದು, ಪಾಲಿಹೌಸ್ ನಲ್ಲಿ 10 ಅಡಿ ಬೆಳೆಯುವ ಟೊಮೆಟೊ ತಳಿ ಎಲ್ಲರ ಗಮನ ಸೆಳೆಯಿತು.
ಮಳೆಗಾಲದಲ್ಲಿ ಟೊಮೆಟೊ ಇಳುವರಿ ಕಡಿಮೆ ಮತ್ತು ಬೆಳೆ ಸಹ ಕಡಿಮೆ. ಆದ್ದರಿಂದ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಗಗನಕ್ಕೇರಿರುತ್ತೆ. ಈ ಸಮಯದಲ್ಲಿ ಪಾಲಿಹೌಸ್ ನಲ್ಲಿ ಟೊಮೆಟೊ ಬೆಳೆಯುವುದು ಲಾಭದಾಯಕವಾಗಿದೆ. ಪಾಲಿಹೌಸ್ ನಲ್ಲಿ ಹವಾಮಾನದ ವೈಪರಿತ್ಯ ಮತ್ತು ಕೀಟಗಳ ಕಾಟ ಇಲ್ಲದಿರುವುದರಿಂದ ಗುಣಮಟ್ಟದ ಟೊಮೆಟೊ ಫಸಲು ಸಿಗುತ್ತೆ. ಮಳೆಗಾಲದಲ್ಲಿ ಪಾಲಿಹೌಸ್ ನಲ್ಲಿ ಟೊಮೆಟೊ ಬೆಳೆ ಲಾಭದಾಯಕವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಓದಿ : ರಾಷ್ಟ್ರೀಯ ತೋಟಗಾರಿಕೆ ಮೇಳ: ಘಮ ಘಮಿಸಿದ ಪುದಿನ ತಳಿಗಳು
ಸಾಮಾನ್ಯವಾಗಿ ಟೊಮೆಟೊ 4 ರಿಂದ 5 ಅಡಿ ಬೆಳೆಯುತ್ತೆ. ಪಾಲಿಹೌಸ್ ನಲ್ಲಿ ಇದೇ ಟೊಮೆಟೊ ಗಿಡಗಳನ್ನು 10 ಅಡಿಯವರೆಗೂ ಬೆಳೆಸಬಹುದು. ಗಿಡಗಳಿಗೆ ದಾರವನ್ನು ಕಟ್ಟಿ ಮೇಲ್ಮುಖವಾಗಿ ಬೆಳೆಯುವಂತೆ ಮಾಡಬೇಕು. ಮತ್ತು ಗಿಡದ ಕವಲು ಒಡೆದ ಕುಡಿಗಳನ್ನ ಕತ್ತರಿಸಬೇಕು, ಇದರಿಂದ ಗಿಡ ವೇಗವಾಗಿ ಬೆಳೆಯುತ್ತೆ. ಎತ್ತರವಾಗಿ ಬೆಳೆಯುವುದರಿಂದ ಪಾಲಿಹೌಸ್ ಜಾಗದ ಸದ್ಪಳಕೆಯಾಗುತ್ತೆ. 2 ತಿಂಗಳು 15 ದಿನದಲ್ಲಿ ಗಿಡಗಳು 10 ಅಡಿ ಬೆಳೆಯುತ್ತೆ, 12 ತಿಂಗಳಲ್ಲಿ 30 ಅಡಿಗಳಷ್ಟು ಬೆಳೆಯಬಲ್ಲದು. ಆದರೆ 10 ಅಡಿ ಮಾತ್ರ ಬೆಳೆಯುವಂತೆ ಮಾಡಲಾಗುತ್ತೆ. ಒಂದು ಗಿಡದಲ್ಲಿ ಸರಾಸರಿ 10 ಕೆಜಿ ಇಳುವರಿ ಸಿಗುತ್ತದೆ.
ತೆರೆದ ಪ್ರದೇಶದಲ್ಲಿ ಟೊಮೆಟೊ ಬೆಳೆಯುವುದಕ್ಕಿಂತ ಪಾಲಿಹೌಸ್ ನಲ್ಲಿ ಬೆಳೆಯುವ ವೆಚ್ಚ ಹೆಚ್ಚು. ಒಂದು ಕೆಜಿ ಟೊಮೆಟೊಗೆ 20 ರೂಪಾಯಿ ಸಿಕ್ಕರೆ ಮಾತ್ರ ಲಾಭದಾಯಕವಾಗಲಿದೆ. ಆದ್ದರಿಂದ ಮಳೆಗಾಲದಲ್ಲಿ ಇಳುವರಿ ಕುಸಿಯುವುದರಿಂದ ಪಾಲಿಹೌಸ್ ನಲ್ಲಿ ಟೊಮೆಟೊ ಬೆಳೆಯುವುದು ಲಾಭದಾಯಕವಾಗಿದೆ ಎಂಬುದು ಕೃಷಿ ವಿಜ್ಞಾನಿಗಳ ಸಲಹೆಯಾಗಿದೆ.