ಆನೇಕಲ್: ಕಳೆದ ವರ್ಷ ಮಳೆ ಅಭಾವದಿಂದ ತತ್ತರಿಸಿದ್ದ ಬೆಳೆಗಾರನಿಗೆ ಈ ಬಾರಿಯೂ ಬರವೆಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆನೇಕಲ್ ಎಂದರೆ ರಾಗಿಯ ಕಣಜ ಎಂದೇ ಪ್ರಸಿದ್ದಿಯನ್ನು ಪಡೆದಿದೆ, ಇರುವ ಒಟ್ಟು ಕೃಷಿ ಭೂಮಿ ಹತ್ತು ಸಾವಿರ ಹೆಕ್ಟೇರ್, ಆದರೆ ಅದರಲ್ಲಿ ಆರೂವರೆ ಹೆಕ್ಟೇರ್ ನಷ್ಟು ರೈತರು ಮಳೆ ಆಧಾರಿತ ರಾಗಿ ಕೃಷಿ ಮಾಡುತ್ತಿದ್ದರು. ಪಕ್ಕದ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿಯೂ ಒಂಬತ್ತುವರೆ ಸಾವಿರ ಹೆಕ್ಟೇರ್ ಭೂಮಿಯಲ್ಲಿ ಆರುವರೆ ಸಾವಿರ ಹೆಕ್ಟೇರ್ ನಲ್ಲಿ ರಾಗಿಯ ಬೆಳೆಯನ್ನು ಬಹು ಪಾಲು ಬೆಳೆಯುತ್ತಿದ್ದರಿಂದ ರಾಗಿ ಕಣಜ ಎಂತಲೇ ಕರೆಯುತ್ತಿದ್ದರು. ಒಂದು ಕಾಲದಲ್ಲಿ ತಮಿಳುನಾಡಿಗೂ ರಾಗಿಯನ್ನು ಪೂರೈಸುತ್ತಿದ್ದ ಆನೇಕಲ್ ಇಂದು ಮಳೆಯ ಕೊರತೆಯಿಂದಾಗಿ ತಮಿಳುನಾಡಿ ನಿಂದ ರಾಗಿಯನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಳೆದ ತಿಂಗಳು ಮಳೆ ಸುಮಾರಾಗಿ ಬಂದು ನೆಲ ಹದ ಮಾಡಿಟ್ಟುಕೊಂಡಿದ್ದ ಹೊಲಗಳೆಲ್ಲಾ ಮಳೆಯಿಲ್ಲದೆ ಒಣಗಿ ಸೊರಗಿವೆ. ಕಳೆದ ಬಾರಿಯಂತೂ ಮಳೆಯಿಲ್ಲದೆ ಬರದಿಂದಾಗಿ ಜನ-ಜಾನುವಾರು ತತ್ತರಿಸಿದ್ದವು. ಈ ಬಾರಿ ಅಕಾಲಿಕ ಮಳೆಗೆ ಬರದ ಛಾಯೆ ರೈತನ ಮುಖದಲ್ಲಿ ಮೂಡುತ್ತಿದ್ದು ಆಕಾಶದತ್ತ ಮುಖಮಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಈಗ ವಾಡಿಕೆಯಂತೆ ಮುಂಗಾರು ಮಳೆ ಚುರುಕುಗೊಂಡಿದ್ದರೆ ಎಳ್ಳು ಬಿತ್ತನೆಯಾಗಿ ಮೂರು ಇಂಚು ಪೈರು ಬೆಳೆದಿರುತ್ತಿತ್ತು. ಕೆರೆ ಕುಂಟೆಗಳೆಲ್ಲ ಹಿಂದಿನ ಬೇಸಿಗೆಗೆ ಕಾದ ಬಾಣೆಲೆಗಳಾಗಿ ತಳ ಒಣಗಿ ಬಣಗುಡುತ್ತಿವೆ. ಜಾನುವಾರುಗಳಿಗೆ ಒಣ ಮೇವನ್ನೇ ಆಶ್ರಿಯಿಸಿದ್ದು ಬೇರೆಡೆಯಿಂದ ದುಪ್ಪಟ್ಟು ಪಾವತಿಸಿ ತರುತ್ತಿರುವುದು ಬರಗಾಲದ ಮುನ್ಸೂಚನೆಗೆ ಸಾಕ್ಷಿಯಾಗಿದೆ.
ಇದರಿಂದಾಗಿ ರಾಗಿ ಬೆಲೆಯೂ ತಾರಕಕ್ಕೇರಿದ್ದು ಪಕ್ಕದ ಡೆಂಕಣಿಕೋಟೆ, ಕೃಷ್ಣಗಿರಿ ಜಿಲ್ಲೆಗಳತ್ತ ರೈತರು ರಾಗಿಗಾಗಿ ಓಡಾಟಕ್ಕೆ ಮುಂದಾಗಿದ್ದಾರೆ. ಇನ್ನು ಸರ್ಕಾರ ನೀಡುವ ಎರೆಡು ಮೂರು ಸಾವಿರಕ್ಕೆ ಕೈಚಾಚಿದರೂ ಖರ್ಚಾಗಿರುವ ಆರೇಳು ಸಾವಿರಕ್ಕೆ ಬಡ್ಡಿಗೂ ಸಾಕಾಗುವುದಿಲ್ಲ ಎಂದು ಬೆಳೆಗಾರರು ಕೈಚೆಲ್ಲಿ ಕುಳಿತಿದ್ದಾರೆ.