ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಚರ್ಮಗಂಟು ರೋಗದ ನಂತರ ಮೈಕ್ರೋಪ್ಲಾಸ್ಮಾ ಬ್ಯಾಕ್ಟೀರಿಯಾವು ಜಾನುವಾರುಗಳನ್ನು ಕಾಡುತ್ತಿದೆ. ತಾಲೂಕಿನ ಅಪ್ಪಕಾರನಹಳ್ಳಿಯಲ್ಲಿ ಮೈಕ್ರೋಪ್ಲಾಸ್ಮಾ ಬ್ಯಾಕ್ಟೀರಿಯಾಕ್ಕೆ ಸುಮಾರು 70 ಕುರಿಗಳು ಸಾವನ್ನಪ್ಪಿರುವುದು ಕುರಿಗಾಹಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ರೈತ ಗೋವಿಂದರಾಜು ಎಂಬವರಿಗೆ ಸೇರಿದ ಸುಮಾರು 70 ಕುರಿಗಳು ಸಾವನ್ನಪ್ಪಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಸುಮಾರು 20 ಕುರಿಗಳಿಂದ ಕುರಿಸಾಕಾಣಿಕೆ ಆರಂಭಿಸಿದ ಅವರು, ಒಟ್ಟು 120 ಕುರಿಗಳನ್ನು ಹೊಂದಿದ್ದರು. 120 ಕುರಿಗಳಲ್ಲಿ 70 ಕುರಿಗಳು ಈಗಾಗಲೇ ಸಾವನ್ನಪ್ಪಿದ್ದು, ಇನ್ನುಳಿದ ಕುರಿಗಳೂ ಬದುಕುಳಿಯುವ ಯಾವ ಭರವಸೆ ಇಲ್ಲದೆ ಚಿಂತೆಗೀಡಾಗಿದ್ದಾರೆ.
70ಕ್ಕೂ ಹೆಚ್ಚು ಕುರಿಗಳು ಸಾವು : ಗೋವಿಂದರಾಜು ಒಂದೇ ಕೊಟ್ಟಿಗೆಯಲ್ಲಿ 120 ಕುರಿಗಳನ್ನು ಸಾಕುತ್ತಿದ್ದರು. ಪ್ರಾರಂಭದಲ್ಲಿ ಕುರಿಗಳು ಕೆಮ್ಮುವುದರಿಂದ ರೋಗದ ಲಕ್ಷಣ ಕಾಣಿಸಿಕೊಂಡಿದೆ. ನಂತರ ಮೇವು ತಿನ್ನದೆ ಕೆಲವು ಕುರಿಗಳು ನಿತ್ರಾಣಗೊಂಡಿದ್ದು, ಅಕ್ಟೋಬರ್ 16ರಂದು ಮೊದಲ ಕುರಿ ಸಾವನ್ನಪ್ಪಿತ್ತು. ಬಳಿಕ 17ರಂದು ಎರಡು ಕುರಿ ಸಾವನ್ನಪ್ಪಿವೆ. ಅ. 18 ರಂದು 20 ಕುರಿಗಳು ಒಮ್ಮೆಗೇ ಸಾವನ್ನಪ್ಪಿದ್ದು, ಈ ಬಗ್ಗೆ ಗೋವಿಂದರಾಜು ಪಶು ವೈದ್ಯರಿಗೆ ತಿಳಿಸಿದ್ದಾರೆ.
ಕುರಿಗಳ ಮೇಲೆ ಮೈಕ್ರೋಪ್ಲಾಸ್ಮಾ ಬ್ಯಾಕ್ಟೀರಿಯಾ ದಾಳಿ : ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರು ಕುರಿಗಳಿಗೆ ಲಸಿಕೆ ನೀಡಿದ್ದಾರೆ. ಸಾವನ್ನಪ್ಪಿದ ಕುರಿಗಳ ರಕ್ತದ ಸ್ಯಾಂಪಲ್ ತೆಗೆದು ಹೆಬ್ಬಾಳದಲ್ಲಿನ ಪಶು ಆರೋಗ್ಯ ಮತ್ತು ವಿಜ್ಞಾನ ಕೇಂದ್ರದ ಲ್ಯಾಬ್ ಗೆ ಕಳಿಸಿದ್ದಾರೆ. ಬಳಿಕ ಎರಡು ದಿನಗಳ ಕಾಲ ಕುರಿಗಳ ಸಾವು ನಿಂತಿದೆ. ಆದರೆ ಅಕ್ಟೋಬರ್ 20ರಂದು ಮತ್ತೆ 20 ಕುರಿಗಳು ಸಾವನ್ನಪ್ಪಿದ್ದು, ಸಾವಿನ ಸರಣಿ ಮುಂದುವರೆದು ಸದ್ಯ 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಲ್ಯಾಬ್ ವರದಿಯಲ್ಲಿ ಕುರಿಗಳ ಸಾವಿಗೆ ಮೈಕ್ರೋಪ್ಲಾಸ್ಮಾ ಬ್ಯಾಕ್ಟೀರಿಯಾ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ.
ಸದ್ಯ ಗ್ರಾಮದಲ್ಲಿ ಪಶು ವೈದ್ಯರ ತಂಡ ಬೀಡು ಬಿಟ್ಟಿದ್ದು, ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಮೈಕ್ರೋಪ್ಲಾಸ್ಮಾ ಬ್ಯಾಕ್ಟೀರಿಯಾ ಲಸಿಕೆಯನ್ನು ಹಾಕಲಾಗುತ್ತಿದೆ. ಕುರಿಗಳ ಕೊಟ್ಟಿಗೆಯನ್ನು ಶುಚಿಯಾಗಿಟ್ಟುಕೊಳ್ಳುವಂತೆ ಮತ್ತು ಜಾನುವಾರುಗಳಿಗೆ ಶುದ್ಧವಾದ ನೀರು ಕುಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಪರಿಹಾರದ ಭರವಸೆ ನೀಡಿದ ಶಾಸಕರು : ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಪಶುವೈದ್ಯರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪ್ರತಿ ಕುರಿಗೆ 5 ಸಾವಿರ ರೂಪಾಯಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ. ಚರ್ಮಗಂಟು ರೋಗ ರೈತರನ್ನು ಕಾಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ರೋಗ ರೈತರ ನಿದ್ದೆಗೆಡಿಸಿದೆ.
ಇದನ್ನೂ ಓದಿ : ನಾನು ಯಾರನ್ನೂ ಬಿಡಲ್ಲ ಅಬ್ಬರಿಸುತ್ತೇನೆ: ಅರುಣ್ಸಿಂಗ್ಗೆ ಯತ್ನಾಳ್ ಟಾಂಗ್