ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೆಲಮಂಗಲ ನಗರದಲ್ಲಿ ಅಂಗಡಿ, ಗ್ಯಾರೇಜ್ಗಳಲ್ಲಿ ಕೆಲಸಕ್ಕೆ ಇದ್ದ 5 ಮಂದಿ ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ , ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಯಾಗಿ ನೆಲಮಂಗಲ ನಗರದಲ್ಲಿ ಕಾರ್ಯಾಚರಣೆ ಮತ್ತು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಳ್ಳದಂತೆ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿದರು. ನೆಲಮಂಗಲ ಪಟ್ಟಣದ ಗ್ಯಾರೇಜ್, ಬೇಕರಿ, ಹೂವಿನ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ವೇಳೆ 5 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ.
14 ವರ್ಷಕ್ಕಿಂತ ಕಡಿಮೆ ಇರುವ 5 ಬಾಲ ಕಾರ್ಮಿಕರನ್ನು ರಕ್ಷಿಸಿ ನೆಲಮಂಗಲದ ಸಂದೀಪ್ ಸೇವಾ ನಿಲಯಂ ಸಂಸ್ಥೆಯ ಬಾಲಕಾರ್ಮಿಕರ ವಿಶೇಷ ತರಬೇತಿ ಕೇಂದ್ರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಯಿತು. ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಿದ್ದು , ಶುಕ್ರವಾರದಂದು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು. ಸದರಿ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸುಬ್ಬಾರಾವ್ ತಿಳಿಸಿದ್ದಾರೆ.