ದೊಡ್ಡಬಳ್ಳಾಪುರ : ಮಧ್ಯರಾತ್ರಿ ಪೆಟ್ರೋಲ್ ಬಂಕ್ಗೆ ನುಗ್ಗಿದ್ದ ಮುಸುಕುಧಾರಿಗಳ ಗ್ಯಾಂಗ್ ಲಾಂಗ್ ತೋರಿಸಿ ಕ್ಯಾಷಿಯರ್‌ನ ಹೆದರಿಸಿ ಇಪ್ಪತ್ತು ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯ ರೈಲ್ವೆ ಸ್ಟೇಷನ್ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಡಿ.19ರ ಮಧ್ಯರಾತ್ರಿಯಲ್ಲಿ ನೈಟ್ಗಸ್ತಿನಲ್ಲಿದ್ದ ಬೀಟ್ ಪೊಲೀಸರು ಪೆಟ್ರೋಲ್ ಬಂಕ್ಗೆ ಭೇಟಿ ನೀಡಿ ತೆರಳಿದ್ದಾರೆ. ಪೊಲೀಸರು ಹಿಂದಿರುಗಿದ ತಕ್ಷಣವೇ ರಾತ್ರಿ 1:56ಕ್ಕೆ ಎರಡು ಬೈಕ್ಗಳಲ್ಲಿ ಹೆಲ್ಮೆಟ್ ಮತ್ತು ಮಂಕಿ ಕ್ಯಾಪ್ ಧರಿಸಿ ಬಂದ ಆರು ಜನರ ತಂಡ ಪೆಟ್ರೋಲ್ ಬಂಕ್ಗೆ ನುಗ್ಗಿದೆ.
ದುಷ್ಕರ್ಮಿಗಳು ಕ್ಯಾಷಿಯರ್ ಮಂಜುನಾಥ್ ಎಂಬುವರಿಗೆ ಹೆದರಿಸಿ, ಕ್ಯಾಷ್ ಬಾಕ್ಸ್ನಲ್ಲಿದ್ದ ₹20 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ಫೂಟೇಜ್ ವಶಕ್ಕೆ ಪಡೆದು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.