ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಕೈಗೊಂಡಿದ್ದು, ಇಂದು 13 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ವಿದ್ಯಾಭ್ಯಾಸಕ್ಕೆಂದು ತೆರಳಿದವರು ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 13 ವಿದ್ಯಾರ್ಥಿಗಳು ಬಂದಿಳಿದರು. ಇವರನ್ನು ಬರಮಾಡಿಕೊಂಡ ಪೋಷಕರು ತಮ್ಮ ಮಕ್ಕಳನ್ನ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಟ್ಯಾಕ್ಸಿ ಹತ್ತಿಸಿ ನನ್ನನ್ನು ಭಾರತಕ್ಕೆ ಕಳುಹಿಸಿದ್ದೇ ನವೀನ್: ಭಾವುಕನಾದ ಸ್ನೇಹಿತ
ಇದೇ ವೇಳೆ ಮಾತನಾಡಿದ ವಿದ್ಯಾರ್ಥಿ ಮೋಹನ್, ಫೆ. 24 ರಂದು ನಾನು ಟಿಕೆಟ್ ಬುಕ್ ಮಾಡಿದ್ದೆ. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕ್ಯಾನ್ಸಲ್ ಆಗಿತ್ತು. ಆನಂತರ ನಾವು ರೊಮೇನಿಯಾ ದೇಶದ ಗಡಿ ಭಾಗಕ್ಕೆ ಬಂದೆವು. ಉಕ್ರೇನ್ ದೇಶಕ್ಕೆ ಭಾರತ ಬೆಂಬಲ ನೀಡದ್ದಕ್ಕೆ ಉಕ್ರೇನ್ ಸೈನಿಕರು ನಮಗೆ ಸಹಾಯ ಮಾಡಲಿಲ್ಲ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು, ಕೊರೆಯುವ ಚಳಿಯಲ್ಲಿ ಎರಡು ದಿನ ರೊಮೇನಿಯಾ ಗಡಿ ಭಾಗದಲ್ಲಿಯೇ ಇದ್ದೆವು. ರೊಮೇನಿಯಾಗೆ ಬಂದ ನಂತರ ಅಲ್ಲಿನ ಜನರು ನಮಗೆ ಆಶ್ರಯ ಮತ್ತು ಆಹಾರ ನೀಡಿದರು ಎಂದು ತಮ್ಮ ಅನುಭವ ಹಂಚಿಕೊಂಡರು.