ದೇವನಹಳ್ಳಿ (ಬೆಂ.ಗ್ರಾಮಾಂತರ): ವಿವಿಧ ರಾಜ್ಯಗಳಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ದೇವನಹಳ್ಳಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅವರಲ್ಲಿ 12 ಮಂದಿಗೆ ಕೊರೊನಾ ಸೊಂಕು ದೃಢವಾಗಿದೆ.
12 ಜನ ಸೋಂಕಿತರಲ್ಲಿ 11 ಮಂದಿ ರಾಜ್ಯದ ವಿವಿಧ ಜಿಲ್ಲೆಯ ನಿವಾಸಿಗಳಾಗಿದ್ದು, ಒಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ನಿವಾಸಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಸೋಂಕಿತರಲ್ಲಿ ಐವರು ಮಂಡ್ಯ ಜಿಲ್ಲೆಯವರಾಗಿದ್ದು, ಪಿ-4324, ಪಿ-4325 ಮತ್ತು ಪಿ-4326 ಎಂದು ಗುರುತಿಸಲಾಗಿದೆ. ಮೇಲುಕೋಟೆಯ ಪಿ-4332, ನಾಗಮಂಗಲ ಪಿ-4334 ಕೆ.ಆರ್.ಪೇಟೆ ಪಿ-4327, ಪಿ-4328 ಮತ್ತು ಪಿ-4329, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಿವಾಸಿಗಳಾಗಿದ್ದು, ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.
ರಾಮನಗರ ಜಿಲ್ಲೆಯ ಪಿ-4330 ಹಾಗೂ ಬೆಂಗಳೂರು ನಗರ ಜಿಲ್ಲೆಯ ಟಿ.ದಾಸರಹಳ್ಳಿಯ ಪಿ-4331 ಗುಜರಾತ್ನ ಅಹಮದಾಬಾದ್ನಿಂದ ಹಿಂದಿರುಗಿದವರಾಗಿದ್ದು, ಮತ್ತೊಬ್ಬ ವ್ಯಕ್ತಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕದ ನಿವಾಸಿ ಪಿ-4333 ರಾಜಸ್ಥಾನದಿಂದ ಹಿಂದಿರುಗಿದವರಾಗಿದ್ದಾರೆ.
11 ಸೋಂಕಿತ ವ್ಯಕ್ತಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶೀಯ ವಿಮಾನ ಮೂಲಕ ಮೇ 31ರಂದು ಆಗಮಿಸಿದ್ದು, ಅಂದಿನಿಂದ ದೇವನಹಳ್ಳಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ವ್ಯಕ್ತಿ ಪಿ-4335, ಅವರು ತಮ್ಮ ಮೂಲ ಸ್ಥಳ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲ್ಲಂಪಳ್ಳಿ ಗ್ರಾಮಕ್ಕೆ ಹೋಗಿ ರಾಜ್ಯಕ್ಕೆ ಹಿಂದಿರುಗಿದವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಟ್ಟಾಗ ಸೋಂಕು ದೃಢಪಟ್ಟಿದೆ.
ಎಲ್ಲಾ ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.