ಹೊಸಕೋಟೆ (ಬೆಂ.ಗ್ರಾಂ): ಹೊಸಕೋಟೆಯಲ್ಲಿರುವ ಎಂವಿಜೆ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸುಸಜ್ಜಿತ ಮೈಕ್ರೋ ಲ್ಯಾಬ್ ತೆರೆದಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಲೋಕಾರ್ಪಣೆ ಮಾಡಿದರು.
ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನಕ್ಕೆ 1 ಲಕ್ಷ ಕೋವಿಡ್ ಟೆಸ್ಟ್ ಮಾಡುವ ಗುರಿ ತಲುಪಲಿದ್ದೇವೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ಕೇವಲ ಒಂದು ಲ್ಯಾಬ್‌ನಿಂದ ಪ್ರಾರಂಭವಾದ ಕೋವಿಡ್ ಟೆಸ್ಟ್, ಕೇವಲ 6 ತಿಂಗಳಲ್ಲಿ 108 ಲ್ಯಾಬ್‌ಗಳನ್ನು ತೆರೆದಿದ್ದೇವೆ. ಪ್ರಾರಂಭದಲ್ಲಿ ಸುಮಾರು 300 ಕೋವಿಡ್ ಟೆಸ್ಟ್‌ನಿಂದ ಇದೀಗ 75 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದಿನಕ್ಕೆ ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವಿವರಿಸಿದರು.
ಲಸಿಕೆ ಲಭ್ಯವಾದಾಗ ಮಾತ್ರ ಕೋವಿಡ್ ಅನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯ. ಸಮಾಧಾನದ ಸಂಗತಿ ಎಂದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ1.65 ರಷ್ಟಿದ್ದು, ಇದನ್ನು ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಹೊಸಕೋಟೆ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಎಂವಿಜೆ ಕಾಲೇಜು ಆಡಳಿತ ಮಂಡಳಿ ಮೆಡಿಕಲ್ ಕಾಲೇಜು ತೆರೆಯುವ ಮೂಲಕ ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದೆ ಇದರ ಜೊತೆಗೆ ಇದೀಗ ಸುಸಜ್ಜಿತ ಲ್ಯಾಬ್ ತೆರೆಯುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ ಎಂದರು.