ಬಾಗಲಕೋಟೆ : ಹಿಂದಿನ ಜಿಲ್ಲಾ ಪಂಚಾಯತ ಸಿಇಓ ಗಂಗೂಬಾಯಿ ಮಾನಕರ್ ಅವರಿಂದ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.
ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಈ ಗಂಭೀರ ಆರೋಪ ಕೇಳಿಬಂದಿತು. ಹಿಂದಿನ ಸಿಇಓ ಗಂಗೂಬಾಯಿ ಮಾನಕರ್ ಅವರಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೋಟಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ತನಿಖೆಗೆ ಪತ್ರ ಬರೆಯಬೇಕು ಎಂದು ಅಧ್ಯಕ್ಷೆ ಬಾಯಕ್ಕ ಮೇಟಿ ಒತ್ತಾಯಿಸಿದರು.
ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮ ಪಂಚಾಯತ ಮೂಲಕ ಗೋಡೆ ಬರಹ ಹಾಗೂ ಬ್ಯಾನರ್ ಹೀಗೆ... ಪ್ರಚಾರದ ಜಾಗೃತಿ ಫಲಕಗಳನ್ನು ಅಳವಡಿಸಲು ಮತ್ತು ಬರೆಸಲು ತಮ್ಮ ಗಮನಕ್ಕೆ ತರದೇ ಧಾರವಾಡದ ಏಜೆನ್ಸಿಯೊಂದಕ್ಕೆ ಮಾತ್ರ ಏಕೆ ಟೆಂಡರ್ ಕೊಟ್ಟರು? ಎಂದು ಪ್ರಶ್ನಿಸಿದ ಸದಸ್ಯರು, ಮಾನಕರ್ ಕೋಟಿಗೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ಕಾಲಮಿತಿಯೊಳಗೆ ತನಿಖೆಯಾಗಿ ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಓ. ಟಿ ಭೂಬಾಲನ್, ಯಾವುದೇ ಓರ್ವ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಬಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಥವಾ ಒಂದು ಕಮೀಟಿಯನ್ನು ರಚಿಸಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲು ಅವಕಾಶವಿದೆ ಎಂದು ಹೇಳಿದರು.
ಹಿಂದಿನ ಸಿಇಓ ಮಾನಕರ್ ತಮಗೆ ಬಂದ ರೀತಿ ಕೆಲಸ ಮಾಡಿದ್ದಾರೆ, ಸದಸ್ಯರಿಗೆ ಗೌರವ ಕೂಡ ಕೊಡಲಿಲ್ಲ, ಸರ್ಕಾರದ ದುಡ್ಡನ್ನು ಸಹ ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಸದಸ್ಯರು ದೂರಿದರು.