ಬಾಗಲಕೋಟೆ : ಗುಳೇದಗುಡ್ಡ ಪಟ್ಟಣದಲ್ಲಿ ಯುಗಾದಿ ಪಾಂಡ್ಯದಿನ ದಂದು ಮಳೆ, ಬೆಳೆ ಸೇರಿದಂತೆ ರಾಜಕೀಯ ಹಾಗೂ ವ್ಯಾಪಾರ, ವಹಿವಾಟು ಬಗ್ಗೆ ಭವಿಷ್ಯ ಹೇಳುವ ವಿಶೇಷ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತದೆ. ಹಲವು ವರ್ಷಗಳಿಂದ ಇಂತಹ ಪದ್ದತಿಯನ್ನು ಮಾಡಿಕೊಂಡು ಬರುತ್ತಿದ್ದು, ಯುಗಾದಿ ದಿನದಂದು ಬೆಳಗಿನ ಜಾವ ಭವಿಷ್ಯ ಕೇಳಲು ಒಂದೆಡೆ ಜನ ಸೇರಿರುತ್ತಾರೆ.
ಗುಳೇದಗುಡ್ಡದ ಇಲಾಳ ಮೇಳದಿಂದ ಮಳೆ, ಬೆಳೆ ಭವಿಷ್ಯ ನುಡಿಯುವ ವಾಡಿಕೆ ಹಿಂದಿನ ಕಾಲದಿಂದಲೂ ಬಂದಿದೆ. ಪಟ್ಟಣದ ಮಾರವಾಡಿ ಬಗಿಚ್ದಲ್ಲಿ, ನಾಗಪ್ಪ ಚಿಂದಿ ಹಾಗೂ ಮಲ್ಲೇಶ್ ಗೊಬ್ಬಿ ಎಂಬುವರು ಭವಿಷ್ಯ ಸಾರ ತಿಳಿಸುತ್ತಾರೆ. ಪ್ರಸಕ್ತ ವರ್ಷ ಮಳೆ, ಬೆಳೆ ಭರ್ಜರಿ ಇದೆ. ಗುಳೇದಗುಡ್ಡದ ಖಣ ಸೇರಿ ಜವಳಿ ವ್ಯಾಪಾರ ಉತ್ತಮವಾಗಿದೆ. ಭೂಮಿ ಕುಸಿಯುವ ಅಪಾಯ ಇದ್ದು, ಅಪಾರ ವಾಹನಗಳಿಗೆ ದಕ್ಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಆಕಾಶದಲ್ಲಿ ಹಾರಾಡುವ ವಿಮಾನವೊಂದು ಮುಟ್ಟುವ ಜಾಗ ತಲುಪದೇ ಬೇರೆ ಕಡೆಗೆ ಹೋಗಲಿದೆ. ಗಾಳಿ ಅತ್ಯಂತ ವೇಗವಾಗಿ ಬೀಸಲಿದೆ. ಗಿಡಮರಗಳು ಉರಳಲಿವೆ, ಪ್ರಾಣಿಪಕ್ಷಿಗಳಿಗೆ ಹಾನಿ ಆಗಲಿದೆ. ಈ ವರ್ಷ ಮೂರು ರಾಜ್ಯಗಳಲ್ಲಿ ಮಿಂಚು ಗುಡುಗುಗಳ ಆರ್ಭಟ ಹೆಚ್ಚಾಗಿರುತ್ತೆ ಅಂತಾ ಭವಿಷ್ಯ ಹೇಳಿದ್ದಾರೆ. ಎಕ್ಕೆ ಎಲೆ ಹಾಗೂ ಹೂವು ಹಿಡಿದು ಫಲ ಭವಿಷ್ಯ ಹೇಳುವುದು ವಿಶೇಷ.
ಭವಿಷ್ಯ ಹೇಳುವ ಕ್ರಮ : ಯುಗಾದಿ ಅಮವಾಸ್ಯೆ ರಾತ್ರಿಯಲ್ಲಿ ಈ ಸ್ಥಳದಲ್ಲಿ ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿರುತ್ತಾರೆ. ಮಣ್ಣಿನಿಂದ ಎತ್ತು, ರೈತ, ರಾಜಕೀಯ ವ್ಯಕ್ತಿ, ಬಟ್ಟೆ ಹಾಗೂ ವಿವಿಧ ಆಹಾರ ಧಾನ್ಯಗಳ ಜೊತೆಗೆ ಮಣ್ಣಿನ ಬಿಂದಿಗೆಯಲ್ಲಿ ನೀರು ಹಾಕಿಕೊಂಡು ಪೂಜೆ ಸಲ್ಲಿಸುತ್ತಾರೆ. ಮರು ದಿನ ಯುಗಾದಿ ಪಾಂಡ್ಯದಿನದಂದು ಬೆಳಗಿನ ಜಾವ ಬಂದು ನೋಡುತ್ತಾರೆ. ಗಾಳಿಗೆ ಚೆಲ್ಲಾಪಿಲ್ಲಿ ಆಗಿರುವ ಬಗ್ಗೆ ಅಧ್ಯಯನ ಮಾಡಿ, ಪಂಚಾಂಗ ಹಿಡಿದುಕೊಂಡು ಅದರ ಅನುಸಾರ ಭವಿಷ್ಯ ನುಡಿಯುತ್ತಾರೆ.
ಇವರ ಭವಿಷ್ಯ ಕೇಳಲು ಮುಂಜಾನೆಯಿಂದಲೇ ಜನರು ಬಂದು ಸೇರುತ್ತಾರೆ. ಭವಿಷ್ಯ ಹೇಳುವುದು ಮುಗಿದ ಬಳಿಕ, ಇಲ್ಲಿ ಇರುವ ವಸ್ತುಗಳನ್ನು ಪ್ರತಿಯೊಬ್ಬರು ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ನಂತರ ಈ ವಸ್ತುಗಳನ್ನು ಮನೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಸುಖ, ಸಮೃದ್ಧಿ, ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಭದ್ರಾವತಿಯಲ್ಲಿ ವರುಣನ ಆರ್ಭಟ.. ಧರೆಗುರುಳಿದ ಮರ, ವಿದ್ಯುತ್ ಕಂಬಗಳು..