ಬಾಗಲಕೋಟೆ : ಹೋಳಿ ಹಬ್ಬದ ಸಂದರ್ಭ ಹಲಗೆ ಬಾರಿಸುವ ವಿಚಾರವಾಗಿ ಗಲಾಟೆ ನಡೆದು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಮುಧೋಳ ನಗರದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತ ಯುವಕನನ್ನು ಗಿರೀಶ್ ಪಾಲೋಜಿ(22) ಎಂದು ಗುರುತಿಸಲಾಗಿದೆ. ಈ ಸಂಬಂಧ ಓರ್ವ ಅಪ್ರಾಪ್ತ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಸುಚಿತ್ ಬಂಡಿವಡ್ಡರ್, ಕಾರ್ತಿಕ್ ಮಳಗಾವಿ ಎಂದು ಗುರುತಿಸಲಾಗಿದೆ.
ಮೃತ ಗಿರೀಶ್ ಸಂಬಂಧಿ ಹೇಮಂತ್ ಪಾಲೋಜಿ ಹಾಗೂ ಹನುಮಂತ ಕಾಂಬಳೆ ಮಧ್ಯೆ ಮೊದಲು ಹಲಗೆ ಬಾರಿಸುವ ವಿಚಾರಕ್ಕೆ ಜಗಳ ನಡೆದಿದೆ. ಹೇಮಂತ್ ಪಾಲೊಜಿ ಹನುಮಂತ ಕಾಂಬಳೆಗೆ ಇಲ್ಲಿ ಹಲಗೆ ಬಾರಿಸಬೇಡ ಎಂದು ಹೇಳಿದ್ದಾನೆ. ಅಷ್ಟಕ್ಕೇ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಹೇಮಂತ್ ಗಿರೀಶ್ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಇನ್ನೊಂದು ಕಡೆ ಹನುಮಂತ ತನ್ನ ಸಂಬಂಧಿಕರನ್ನು ಕರೆದುಕೊಂಡು ಬಂದಿದ್ದಾನೆ.
ಅಲ್ಲದೆ ಇಲ್ಲಿನ ಕಾಮಣ್ಣನ ಗಡಿಗೆಯನ್ನು ಒಡೆದಿದ್ದಾನೆ. ಇದು ಎರಡು ಗುಂಪುಗಳ ನಡುವಿನ ಜಗಳಕ್ಕೆ ಕಾರಣವಾಗಿದೆ. ಜಗಳದಲ್ಲಿ ಹೇಮಂತ್ ಹಾಗೂ ಇತರರು ಪರಾರಿಯಾಗಿದ್ದು, ಈ ವೇಳೆ ಗಿರೀಶ್ಗೆ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಲಾಗಿದೆ. ಈ ವೇಳೆ, ಗಂಭೀರ ಗಾಯಗೊಂಡು ನರಳಾಡುತ್ತಿದ್ದರೂ ಯಾರೊಬ್ಬರು ಗಿರೀಶ್ ಹತ್ತಿರ ಸುಳಿದಿಲ್ಲ. ಬಳಿಕ ಗಿರೀಶ್ನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಆರು ಜನರನ್ನು ಮುಧೋಳ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಹೋಳಿ ಹಬ್ಬ ಆಚರಣೆ : ರಾಜ್ಯಾದ್ಯಂತ ಮಾತ್ರವಲ್ಲದೇ ದೇಶಾದ್ಯಂತ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಜಿಲ್ಲೆಯಲ್ಲೂ ಬಹು ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಹಳ್ಳಿ, ಪಟ್ಟಣಗಳಲ್ಲೂ ಯುವಕ ಯುವತಿಯರು ಹೋಳಿ ಎರಚಿ ಕುಣಿದು ಕುಪ್ಪಳಿಸಿದರು.
ಕಲಬುರಗಿಯಲ್ಲಿ ಯುವಕ ಸಾವು : ಕಾಮದಹನಕ್ಕಾಗಿ ಬೆಂಕಿ ಕಿಡಿ ತೆಗೆದುಕೊಂಡು ಹೋಗುವ ವಿಚಾರಕ್ಕೆ ಗಲಾಟೆ ನಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ರವಿಕುಮಾರ ಓಚರ್ (25) ಎಂದು ಗುರುತಿಸಲಾಗಿದೆ.
ಕಾಮದಹನಕ್ಕಾಗಿ ಮಂಗಳವಾರ ಸಂಜೆ ಬೆಂಕಿ ಕಿಡಿ ತೆಗೆದುಕೊಂಡು ಹೋಗುವ ಸಂದರ್ಭ ಒಂದು ಗುಂಪಿನ ಮಧ್ಯೆ ವಾಗ್ವಾದ ನಡೆದಿದೆ. ಈ ವಾಗ್ವಾದದ ನಡುವೆ ರವಿಕುಮಾರ ನೆಲಕ್ಕೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ - ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು