ಬಾಗಲಕೋಟೆ : ನವನಗರದ (ಮುಚಖಂಡಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ 50ಕ್ಕೂ ಹೆಚ್ಚು ಜನರಿದ್ದಾರೆ. ಇಲ್ಲಿರೋರಿಗೆ ನೀಡಲಾಗಿರುವ ಊಟದಲ್ಲಿ ಬಾಲುಳ ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಅಳಲು ಅಲ್ಲಿನ ಜನರದ್ದಾಗಿದೆ.
ಇಲ್ಲಿ ಅನ್ನ-ಸಾಂಬಾರು ನೀಡಲಾಗುತ್ತಿದೆ. ಅನ್ನದ ಅಗಳಿನಲ್ಲಿ ಬಾಲುಳ ಕಾಣಿಸಿಕೊಂಡ್ರೆ ಇನ್ನೂ ಸಾಂಬಾರದಲ್ಲಿ ಬೇರೆ ರೀತಿಯ ಹುಳುಗಳು ಬಂದಿವೆ. ಸಂಬಂಧಿಸಿದವರಿಗೆ ತಿಳಿಸಿದ್ರೂ ಗುಣಮಟ್ಟದ, ಶುಚಿಯಾದ ಆಹಾರ ನೀಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲಿದ್ದವರು ನಮ್ಮ ಮನೆಯಿಂದ ಊಟವನ್ನು ತರಿಸಿಕೊಳ್ಳುತ್ತೇವೆ ಅವಕಾಶ ಕೊಡಿ ಎಂದರೂ ನೀಡುತ್ತಿಲ್ಲ.
ಕ್ವಾರಂಟೈನ್ನಲ್ಲಿರುವವರಿಗೆ ಸಮರ್ಪಕ ಆಹಾರವನ್ನು ನೀಡುತ್ತಿಲ್ಲ. ಹೀಗಾಗಿ ನಮ್ಮ ಮನೆಯಿಂದ ಆಹಾರವನ್ನು ನೀಡುತ್ತೇವೆ ಅನುಮತಿ ಕೊಡಿ ಅಂದರೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಅಂತಿದ್ದಾರೆ ಸಂಬಂಧಿಕರು.
ಗ್ರಾಮೀಣ ಪ್ರದೇಶಕ್ಕೂ ಕೂಡ ವ್ಯಾಪಿಸಿರೋ ಕೊರೊನಾದಿಂದ ಹೆಚ್ಚು ಕ್ವಾರಂಟೈನ್ ಕೇಂದ್ರಗಳು ಹುಟ್ಟುತ್ತಿವೆ. ಆದರೆ, ಗುಣಮಟ್ಟದ ಆಹಾರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯತೆ ವಹಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.