ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರದ ಹಣವನ್ನು ಮಹಿಳೆಯೊಬ್ಬರು ಅವರ ವಾಹನಕ್ಕೆ ಎಸೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಂದು ಸಿದ್ದರಾಮಯ್ಯ ಬಾಗಲಕೋಟೆ ಪ್ರವಾಸದಲ್ಲಿದ್ದಾರೆ. ಕೆರೂರ ಗುಂಪು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಅವರು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಾಗ ಗಾಯಾಳುಗಳಿಗೆ ನೀಡಿದ್ದ ಪರಿಹಾರ ಹಣವನ್ನು ಮರಳಿ ಸಿದ್ದರಾಮಯ್ಯಗೆ ನೀಡಲು ಸಂಬಂಧಿಗಳು ಮುಂದಾದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಣ ಹಿಂಪಡೆದುಕೊಳ್ಳದೆ ವಾಹನದಲ್ಲಿ ಮುಂದೆ ಸಾಗಿದರು. ಆಗ ಮಹಿಳೆಯೊಬ್ಬರು 2 ಲಕ್ಷ ಹಣವನ್ನು ಪೊಲೀಸ್ ಬೆಂಗಾವಲು ವಾಹನಕ್ಕೆಸೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ನಂತರ ನಮ್ಮ ಯಾವುದೇ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಹಿಂದೂ-ಮುಸ್ಲಿಮರೆನ್ನದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ ನಾವೇನೂ ತಪ್ಪು ಮಾಡದೇ ಇದ್ದರೂ, ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಪರಿಹಾರ ಇಂದು ಕೊಡ್ತಾರೆ ಸರಿ. ನಾಳೆ ನಮ್ಮವರು ಒಂದು ವರ್ಷದವರೆಗೆ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು. ಪ್ರತಿದಿನ ಯಾರು ನಮ್ಮ ಸಮಸ್ಯೆ ಕೇಳುತ್ತಾರೆ?" ಎಂದು ಮಹಿಳೆ ನೋವು ತೋಡಿಕೊಂಡರು.
"ಅಳುವವರ ಜೊತೆ ಒಂದು ದಿನ ಅಳಬಹುದು. ಪ್ರತಿದಿನ ಯಾರೂ ಅಳಲ್ಲ. ನಮ್ಮ ಸಮಸ್ಯೆಗೆ ಹಣ ಪರಿಹಾರವಲ್ಲ. ಭಿಕ್ಷೆ ಬೇಡಿಯಾದ್ರೂ ಕುಟುಂಬ ಸಾಕುತ್ತೇವೆ. ನಮಗೆ ಇಂತಹ ಘಟನೆಗಳು ಆಗದಂತೆ ನಡೆದುಕೊಳ್ಳಬೇಕು. ನಮಗೆ ರೊಕ್ಕಾ-ರುಪಾಯಿ ಬ್ಯಾಡ್ರಿ, ಇಂತಹ ಘಟನೆಗಳು ಹಿಂದೂಗಾಗಲಿ, ಮುಸ್ಲಿಮರಿಗಾಲಿ ಯಾರಿಗೂ ಆಗಬಾರದು. ನಮ್ಮ ತಪ್ಪೇನಾದ್ರೂ ಇದ್ರೆ ನಾವು ತಲೆ ಬಾಗಿಸುತ್ತೇವೆ, ನೀವು ಕತ್ತರಿಸಿ ಹೋಗಿ. ಎಫ್ಐಆರ್ ಆದ್ರೆ ನಮ್ಮ ಕುಟುಂಬವೇ ಪೊಲೀಸರ ಮುಂದೆ ಶರಣಾಗುತ್ತಾರೆ" ಎಂದು ಮುಸ್ಲಿಂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಮುಂದಿನ ಸಿಎಂ ಸಿದ್ದರಾಮಯ್ಯ': ಮುದ್ದೇಬಿಹಾಳದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಘೋಷಣೆ
ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನು ಭೇಟಿಯಾದ ಸಿದ್ಧರಾಮಯ್ಯ, ಆರೋಗ್ಯ ವಿಚಾರಿಸಿದರು. ಡಿಸಿ ಸುನೀಲಕುಮಾರ್, ಎಸ್.ಪಿ.ಜಯಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.