ಬಾಗಲಕೋಟೆ: 200 ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರ ಈಗ ವಿದ್ಯುತ್ ದರ ಏರಿಕೆ ಮಾಡಿರುವುದು ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಉಚಿತ ವಿದ್ಯುತ್ ಘೋಷಣೆ ಮಾಡಿ, ಇನ್ನೊಂದೆಡೆ ವಿದ್ಯುತ್ ದರ ಏರಿಕೆ ಮಾಡಿರುವುದು ಜಿಲ್ಲೆಯ ನೇಕಾರರಿಗೆ ಸಂಕಷ್ಟ ಎದುರಾಗಿದೆ.
ರಬಕವಿ, ಬನ್ನಹಟ್ಟಿ, ಮಹಾಲಿಂಗಪುರ, ತೇರದಾಳ, ಕೆರೂರ, ಗುಳೇದಗುಡ್ಡ, ಇಳಕಲ್ ಸೇರಿದಂತೆ ಇತರ ಪ್ರದೇಶದಲ್ಲಿ ನೇಕಾರರ ಸಂಖ್ಯೆ ಹೆಚ್ಚಾಗಿದೆ. ಇದರ ಜೊತೆಗೆ ಮಹಿಳೆಯರೇ ಈಗ ನೇಕಾರಿಕೆ ಉದ್ಯೋಗದಲ್ಲಿ ತೊಡಗಿದ್ದಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ನಿತ್ಯ ವಿದ್ಯುತ್ ಮಗ್ಗದಿಂದ ಸೀರೆ ತಯಾರಿಸುವ ಮಹಿಳಾ ನೇಕಾರರು ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿಗಳ ರವರೆಗೆ ಆದಾಯ ಬರುತ್ತದೆ. ಆದರೆ, ಈಗ ವಿದ್ಯುತ್ ದರ ಏರಿಕೆಯಿಂದಾಗಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಮುಂಚೆ ವಿದ್ಯುತ್ ಮಗ್ಗದ ಬಡ ನೇಕಾರರಿಗೆ 10 ಎಚ್ ಪಿ ಯಂತ್ರ ಹೊಂದಿರುವ ನೇಕಾರಿಕೆಗಳಿಗೆ ಸಬ್ಸಿಡಿ, ಇಲ್ಲವೇ ಕಡಿಮೆ ದರದಲ್ಲಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಈಗ 200 ಯುನಿಟ್ ಉಚಿತ ನೀಡುತ್ತಿದ್ದಾರೆ. ಇದರ ಜೊತೆಗೆ ಬಡ ನೇಕಾರರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ವಿದ್ಯುತ್ ನೀಡಬೇಕು ಎಂದು ರಬಕವಿ ಬನಹಟ್ಟಿ ಪಟ್ಟಣದ ಮಹಿಳಾ ನೇಕಾರರು ಮುಖ್ಯಮಂತ್ರಿ ಗಳಿಗೆ ಒತ್ತಾಯಿಸಿದ್ದಾರೆ.
ನಿತ್ಯ ದುಡಿದರೂ ಮೊದಲೇ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶಿಕ್ಷಣಕ್ಕೆ, ನಿತ್ಯ ದಿನಸಿ ಸಾಮಗ್ರಿಗಳಿಗೆ ಸಾಕಷ್ಟು ಹಣ ವೆಚ್ಚವಾಗುತ್ತಿದೆ. ಪ್ರಮುಖ ದಿನಸಿ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದರಿಂದ ಜೀವನ ನಡೆಸುವುದೇ ಸಂಕಷ್ಟವಾಗಿದೆ. ಇಂತಹ ಸಮಯದಲ್ಲಿ ವಿದ್ಯುತ್ ದರ ಏರಿಕೆ ಆಗಿ, ಹೆಚ್ಚಿನ ಬಿಲ್ ಬರುತ್ತಿದೆ.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮೀ ಯೋಜನೆ ಅಡಿ 2000 ನೀಡಲು ಮುಂದಾಗಿದ್ದಾರೆ. ಈಗ ಮಹಿಳಾ ನೇಕಾರರಿಗೆ 10 ಎಚ್ ಪಿ ಯಂತ್ರ ಉಪಯೋಗಿಸಿ, ವಿದ್ಯುತ್ ಮಗ್ಗದಲ್ಲಿ ಉಪ ಜೀವನ ಸಾಗಿಸುತ್ತಿರುವ ನೇಕಾರರಿಗೆ ಸಬ್ಸಿಡಿ ಇಲ್ಲವೇ ಉಚಿತ ನೀಡಬೇಕು ಎಂದು ಮಹಿಳಾ ನೇಕಾರರ ಮಹಾನಂದ ಜಮಖಂಡಿ ಎಂಬುವವರು ತಿಳಿಸಿದ್ದಾರೆ.
ಆಗಸ್ಟ್ನಿಂದ ಗೃಹಜ್ಯೋತಿ: ಆಗಸ್ಟ್ನಿಂದ ಗೃಹಜ್ಯೋತಿ ಯೋಜನೆ ಸಿಗಲಿದ್ದು, 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆಯಾದರೆ ಸಂಪೂರ್ಣ ಬಿಲ್ ಕಟ್ಟಬೇಕು. ಉಚಿತ ವಿದ್ಯುತ್ ಪಡೆಯಲು ರಿಜಿಸ್ಟ್ರೇಷನ್ ಅಗತ್ಯ. ಸೇವಾ ಸಿಂಧೂ ಪೋರ್ಟಲ್ ನಲ್ಲಿ ಗೃಹಜ್ಯೋತಿ ಆಯ್ಕೆಯಲ್ಲಿ ಮೊದಲು ಆಧಾರ್ ನಂಬರ್ ನಮೂದು ಮಾಡಬೇಕು. ಅಗತ್ಯ ದಾಖಲೆ ಅಪ್ಲೋಡ್ ಮಾಡಬೇಕು. ಆಧಾರ್ ಲಿಂಕ್ ಆಗಿರುವ ನಂಬರಿಗೆ ಮೆಸೇಜ್ ಬರಲಿದೆ. ಇಷ್ಟು ಮಾಡಿ ಪೋರ್ಟಲ್ ಅಪ್ರೂವ್ ಸಕ್ಸಸ್ ಫುಲ್ ಆದರೆ ಉಚಿತ ವಿದ್ಯುತ್ಗೆ ಅರ್ಹರು ಎಂದು ಸಚಿವ ಕೆ ಜೆ ಜಾರ್ಜ್ ಬುಧವಾರವಷ್ಟೇ ತಿಳಿಸಿದ್ದರು.
ಇದನ್ನೂ ಓದಿ: 200 ಯುನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಲೆಕ್ಕಾಚಾರ ಏನಿದೆ ನೋಡಿ!