ಬಾಗಲಕೋಟೆ : ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಗಲು ವೇಷಗಾರರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದರ ಜೊತೆ ಕೋವಿಡ್ ಹೆಗಲೇರಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
ಜಿಲ್ಲೆಯ ಮುರನಾಳ ಪುನರ್ವಸತಿ ಕೇಂದ್ರದ ಬಳಿ ಇರುವ ಹಗಲು ವೇಷಗಾರರ ಕುಟುಂಬದ ಸದಸ್ಯರು, ಮನೆ ಮನೆಗೆ ತೆರಳಿ, ತಬಲಾ ಹಾಗೂ ಹಾರ್ಮೋನಿಯಂ ನುಡಿಸುತ್ತಾ, ತಮ್ಮ ಕಲೆ ಪ್ರದರ್ಶನ ಮಾಡುತಿದ್ದರು. ಗ್ರಾಮದಿಂದ ಗ್ರಾಮಕ್ಕೆ ಸುತ್ತುತ್ತಾ, ಹಾಡು, ಕುಣಿತ ಮಾಡುತ್ತಾ, ಜನರು ನೀಡುವ ಆಹಾರ ಧಾನ್ಯಗಳಿಂದ ಜೀವನ ಸಾಗಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ವೇಷಗಾರರು ಐದು ಆರು ಜನ ಸೇರಿಕೊಂಡು, ರಾಮಾಯಣ, ಮಹಾಭಾರತದ ಸನ್ನಿವೇಶವನ್ನು ಪ್ರದರ್ಶನ ಮಾಡಿ ಜನರಿಗೆ ಮನರಂಜನೆ ನೀಡುತ್ತಿದ್ದರು. ಗ್ರಾಮಸ್ಥರು ನೀಡುವ ಅಲ್ಪಸ್ವಲ್ಪ ಕಾಣಿಕೆ, ಆಹಾರದಿಂದ ಜೀವನ ಸಾಗಿಸುತ್ತಿದ್ದರು. ಆದ್ರೆ, ಇಂದಿನ ಆಧುನಿಕ ತಂತ್ರಜ್ಞಾನ ಇವರ ಕಲೆಯ ನಾಶಕ್ಕೆ ಕಾರಣವಾಗಿದೆ.
ಬಡತನದ ಹಿನ್ನೆಲೆ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಸಹ ಪರದಾಡುತ್ತಿದ್ದಾರೆ. ಅಲ್ಲದೆ, ಕೆಲವರು ತಮ್ಮ ಪೂರ್ವಿಕರ ಕಲೆಯನ್ನು ಬಿಟ್ಟು, ಬೇರೆ ಬೇರೆ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ, ವಂಶಪಾರಂಪರ್ಯೆಯಾಗಿ ಬಂದಿರುವ ಈ ಹಗಲು ವೇಷಗಾರರ ಕಲೆ ನಾಶವಾಗುತ್ತಿದೆ. ಸದ್ಯ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಇವರಿಗೆ ಪ್ರೋತ್ಸಾಹ ನೀಡಬೇಕಿದೆ.