ಬಾಗಲಕೋಟೆ : ಕೊರೊನಾ ರೋಗಿಗಳ ಆರೈಕೆಗೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಎಂಬಿಬಿಎಸ್ ಹಾಗೂ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿಗಾಗಿ ಬಳಕೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಕೊರೊನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೆ, ಆಕ್ಸಿಜನ್ ಸಾಗಣೆ ಮಾಡುವ ವಾಹನಗಳಿಗೆ ಚಾಲಕರು ಸಿಗುತ್ತಿಲ್ಲ.
ಆದರೂ ಸಹ ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಇದಲ್ಲದೆ ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನು ಓದಿ:ಬರೀ ಹೆಣ, ಬೆಡ್ ತೋರಿಸಬೇಡಿ; ಮಾಧ್ಯಮಗಳಿಗೆ ಸಚಿವ ಕತ್ತಿ ಮನವಿ
ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಗುಣಮಟ್ಟದ ಆಕ್ಸಿಜನ್,ವೆಂಟಿಲೇಶನ್ ಹೊಂದಿರುವ ಬೃಹತ್ ಆಸ್ಪತ್ರೆ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಆರು ತಿಂಗಳನಲ್ಲಿ ಇವುಗಳನ್ನು ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಲಾಗಿದೆ. ನಿರಾಣಿ ಫೌಂಡೇಶನ್ ವತಿಯಿಂದ ಬೀಳಗಿ ತಾಲೂಕಿನಲ್ಲಿ ನಾಲ್ಕು ಆ್ಯಂಬುಲೆನ್ಸ್ ನೀಡಲಾಗಿದ್ದು,ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕೊರೊನಾ ರೋಗಿಗಳನ್ನು ಉಚಿತವಾಗಿ ತಲುಪಿಸಲಾಗುವುದು ಎಂದರು.