ಬಾಗಲಕೋಟೆ: ಜಮಖಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಹುನ್ನೂರ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಒಟ್ಟು 2.10 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ. ಜಮಖಂಡಿಯ ಹುಣ್ಣೂರು ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾಗ ಅನುಮಾನಾಸ್ಪವಾಗಿ ಚಲಿಸುತ್ತಿದ್ದ ವಾಹನ ತಡೆದು ನಿಲ್ಲಿಸಿ, ತಪಾಸಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪತ್ತೆಯಾದ ಹಣ ಸೌಹಾರ್ದ ಬ್ಯಾಂಕ್‌ಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ, ಅವರು ಒದಗಿಸಿರುವ ದಾಖಲೆಗಳು ಪರಿಪೂರ್ಣವಾಗಿಲ್ಲ. ಹೀಗಾಗಿ ದಾಖಲೆ ಒದಗಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಸದ್ಯಕ್ಕೆ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ದಾಖಲೆ ಇಲ್ಲದ ನಗದನ್ನು ಪಂಚನಾಮೆ ಸಹಿತ ಜಿಲ್ಲಾಮಟ್ಟದ ಹಣ ಮುಟ್ಟುಗೋಲು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಸಮಿತಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಚೆಕ್ ಪೋಸ್ಟ್‌ನಲ್ಲಿ ದೊರೆತಿರುವ ಹಣದ ಮಾಲೀಕರು ಒಂದು ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್‍ಗೆ ಸಂಬಂಧಿಸಿದವರು. ಅವರು ಹಿಪ್ಪರಗಿ, ಸತ್ತಿ, ಅಥಣಿ, ಬನಹಟ್ಟಿ, ರಬಕವಿ ಹಾಗೂ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತ್ತಿರುವುದಾಗಿ ಮೌಖಿಕ ಮಾಹಿತಿ ನೀಡಿದ್ದಾರೆ.
ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ವೇಳೆ ನಿಗದಿತ ನಮೂನೆಯಲ್ಲಿ ದಾಖಲೆಗಳು ಇಲ್ಲದೇ ಇರುವುದಕ್ಕೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಾಣಿಕೆಗೆ ಬಳಸುವ ಸಂಶಯ ಕಂಡು ಬಂದಿರುವುದರಿಂದ ಪ್ರಸ್ತುತ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ಚೆಕ್ ಪೋಸ್ಟ್ ಬಳಿ ರಸ್ತೆ ಅಪಘಾತ : ಕೂದಲೆಳೆ ಅಂತರದಲ್ಲಿ ಪಾರಾದ ಚುನಾವಣಾ ಸಿಬ್ಬಂದಿ
ಸೊಂಟಕ್ಕೆ ನೋಟು ಸುತ್ತಿಕೊಂಡು ಹಣ ಸಾಗಾಟ: ದ್ವಿಚಕ್ರ ವಾಹನದಲ್ಲಿ ಸೊಂಟದ ಸುತ್ತ ನೋಟಿನ ಕಂತೆ ಕಟ್ಟಿಕೊಂಡು ಹಣ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಏ.6ರಂದು ದಾವಣಗೆರೆ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಗಳಿಂದ 7.5 ಲಕ್ಷ ರೂಗಳನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ: ಫ್ಲೈಯಿಂಗ್ ಸ್ಕ್ವಾಡ್ನಿಂದ 19 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ವಶ: ವಿಜಯನಗರ ಜಿಲ್ಲೆಯ ವಿವಿಧೆಡೆ ನಗದು, ಬಂಗಾರ ವಶ