ಬಾಗಲಕೋಟೆ : ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದೆ. ಹೀಗಾಗಿ ರಾಜ್ಯದ ನೆರೆ ಪರಿಹಾರ ವಿಳಂಬಕ್ಕೆ ಆರ್ಥಿಕ ಕುಸಿತ ಕಾರಣ ಇರಬಹುದು ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿದ್ದಾರೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮಕ್ಕೆ ಭೇಟಿ ನೀಡಿ, ಪರಿಹಾರ ಸಾಮಗ್ರಿಗಳ ವಿತರಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್‌ಗೂ ನೆರೆ ಪರಿಹಾರ ಕೊಟ್ಟಿಲ್ಲ. ಬೇಗ ಪರಿಹಾರ ಕೊಡಿ ಅಂತಾ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಪತ್ರದಲ್ಲಿ ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ, ಪ್ರಧಾನಿಳಿಂದ ಸ್ಪಂದನೆ ಹೇಗೆ ಸಿಗುತ್ತೆ ನೋಡೋಣ. ಮೋದಿ ಅವರು ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ದೇಶದಲ್ಲಿ ಅಭಿವೃದ್ದಿ ಕೆಲಸಗಳಾಗಿವೆ. ನೆರೆ ಪರಿಹಾರ ಮಾತ್ರ ವಿಳಂಬ ಆಗುತ್ತಿದೆ. ಪರಿಹಾರ ಬರಬಹುದು ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಕೈಕಟ್ಟಿ ಹಾಕ್ತಿದ್ದಾರಾ ಅನ್ನೋ ವಿಚಾರವಾಗಿ ಮಾತನಾಡಿ, ನನಗೆ ಹಾಗೆ ಅನ್ನಿಸಿಲ್ಲ. ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದನ್ನು ಸಂಘ ಪರಿವಾರದವರೆ ಹೇಳಿದ್ದಾರೆ. ಅಲ್ಲಿಂದ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದರು.