ಬಾಗಲಕೋಟೆ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೀಳಗಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ರಾತ್ರಿ ನೀರು ಹರಿದು ಬಂದ ಪರಿಣಾಮ ಸೂರ್ಯಕಾಂತಿ, ಶೇಂಗಾ, ಅಲಸಂದಿ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿವೆ.
ಬೀಳಗಿ ತಾಲೂಕಿನ ಕೊರ್ತಿ ಗ್ರಾಮದಲ್ಲಿ ಕಡಲೆ ಬೆಳೆ ತೆಗೆಯಲು ಸಜ್ಜಾಗಿದ್ದ ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿದೆ. ಇದರ ಜೊತೆಗೆ ಸೂರ್ಯಕಾಂತಿ ಸಹ ಜಲಾವೃತಗೊಂಡು ಸಾಕಷ್ಟು ಹಾನಿ ಉಂಟಾಗಿದೆ.
ಮೊದಲೇ ಪೆಟ್ರೋಲಿಯಂ ದರಗಳು ಹೆಚ್ಚಾಗುತ್ತಿರುವ ಹಿನ್ನಲೆ, ಜೀವನ ಸಾಗಿಸುವುದು ಕಷ್ಟವಾಗಿದೆ. ಇನ್ನು, ನೀರು ನುಗ್ಗಿ ಕೈಗೆ ಬಂದ ಬೆಳೆ ನೀರು ಪಾಲಾಗಿದೆ. ಹೀಗಾದರೆ, ತಮ್ಮ ಜೀವನ ಹೇಗೆ ಸಾಗಿಸಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ, ಸೂಕ್ತ ಪರಿಹಾರ ಧನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.