ಬಾಗಲಕೋಟೆ: ವೈದ್ಯರಿಗೆ ಟೋಪಿ ಹಾಕಿ ವಂಚಕರು ಪರಾರಿ ಆಗಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಎಕ್ಸ್ ರೇ ಮಷಿನ್ ಹಾಕಿ ಲಾಭಾಂಶ ಕೊಡುವ ಆಮಿಷ ಒಡ್ಡಿ ಲಕ್ಷ ಲಕ್ಷ ಹಣ ದೋಚಿರುವ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳಾದ ವಿಶ್ವನಾಥ ತೆನಹಳ್ಳಿ, ಪತ್ನಿ ರೂಪಾ ತೆನಹಳ್ಳಿ ಹಾಗೂ ನಾಗರಾಜ ಅಕ್ಕಿ ಎನ್ನುವವರು ಸೇರಿ ಹಣ ದೋಚಿರುವುದಾಗಿ ಆರೋಪಿಸಲಾಗಿದೆ. ಒಟ್ಟು 20 ಲಕ್ಷ 55 ಸಾವಿರ ರೂ. ಮೋಸ ಮಾಡಿರುವ ಆರೋಪಿಗಳ ವಿರುದ್ಧ ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜ ಹೂಗಾರ ಎನ್ನುವವರಿಂದ ದೂರು ದಾಖಲಾಗಿದ್ದು, ಬಾಗಲಕೋಟೆಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎಕ್ಸ್ ರೇ ಮಷಿನ್ ಅಳವಡಿಸೋಣ. ಬಂದ ಲಾಭದಲ್ಲಿ ಹಂಚಿಕೆ ಮಾಡಿಕೊಳ್ಳೋಣ ಎಂದು ಹೇಳಿ ಆರೋಪಿಗಳು ಬಸವರಾಜ ಹೂಗಾರ ಅವರಿಗೆ ಮೋಸ ಮಾಡಿದ್ದಾರೆ.
ಆರೋಪಿಗಳು ಇತರ ಅನೇಕ ವೈದ್ಯರಿಂದ ಇದೇ ರೀತಿ ವ್ಯವಹಾರದಲ್ಲಿ ಲಾಭಾಂಶ ಕೊಡುವ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪ ಇದೆ. ಚೆಕ್ ಬೌನ್ಸ್ ಕೇಸ್ ಸಹ ದಾಖಲಾಗಿದ್ದು, ಸದ್ಯ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
![three-accused-cheats-doctor](https://etvbharatimages.akamaized.net/etvbharat/prod-images/10135108_med.jpg)
ಆರೋಪಿ ವಿಶ್ವನಾಥ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಅನೇಕ ವೈದ್ಯರನ್ನು ಪರಿಚಯ ಮಾಡಿಕೊಂಡಿದ್ದ. ವೈದ್ಯರ ಪರಿಚಯದ ಬಳಿಕ ವಿವಿಧ ವೈದ್ಯರ ಕಡೆ ದುಡ್ಡು ಪಡೆದು ಎಸ್ಕೇಪ್ ಆಗಿದ್ದು, ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಆರೋಪಿಗಳು ಅಂದಾಜು ಎರಡು ಕೋಟಿಯಷ್ಟು ಹಣ ಪಡೆದು ವಂಚಿಸಿದ್ದಾರೆ ಎಂಬ ಶಂಕೆ ಇದೆ. ಸದ್ಯ 20 ಲಕ್ಷ 50 ಸಾವಿರ ರೂಪಾಯಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.