ಬಾಗಲಕೋಟೆ: ರಾಜ್ಯದಲ್ಲಿ ರಾಜಕೀಯ ಬದಲಾವಣೆ ಬಿರುಗಾಳಿ ಜೋರಾಗಿ ಬೀಸುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಂದು ಯಡಿಯೂರಪ್ಪ ರಾಜೀನಾಮೆ ಬಳಿಕ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ.
ಈಗ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಾಗಲಕೋಟೆ ಜಿಲ್ಲೆ ಗಮನ ಸೆಳೆಯುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೇ ಮೂರು ಹೆಸರುಗಳು ಕೇಳಿ ಬರುತ್ತಿರುವುದು ಗಮನಾರ್ಹ.
ನಿರಾಣಿಗೆ ಸಿಗುತ್ತಾ ಚಾನ್ಸ್
ಆರಂಭದಿಂದಲೂ ಬೀಳಗಿ ಶಾಸಕ, ಸಚಿವ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿದೆ. ಅಮಿತ್ ಶಾ ಜೊತೆಗೆ ಸಂಪರ್ಕ ಹೊಂದಿರುವ ನಿರಾಣಿ, ಈಗಾಗಲೇ ದೆಹಲಿ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ನಿರಾಣಿ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಬಹಿರಂಗವಾಗಿ ಹಲವು ಗಂಭೀರ ಆರೋಪಗಳನ್ನ ಮಾಡುತ್ತಿದ್ದಾರೆ. ಈ ಹಿಂದೆ ಅವರ ವಿರುದ್ಧ ಕೇಳಿ ಬಂದ ಆರೋಪಗಳು ಮುಳ್ಳಾಗಬಹುದು ಎನ್ನಲಾಗುತ್ತಿದೆ.
ಒಂದು ವೇಳೆ ಪಂಚಮಸಾಲಿ ಸಮುದಾಯದ ಮುಖಂಡ ಹಾಗೂ ವರಿಷ್ಠರ ಜೊತೆಗೆ ಉತ್ತಮ ಸಂಪರ್ಕ ಹೊಂದಿರುವ ಕಾರಣಕ್ಕೆ ಅದೃಷ್ಟ ಒಲಿಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಮುರಗೇಶ್ ನಿರಾಣಿ ಅವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದು, ಲಿಂಗಾಯತ ಕೋಟಾದಲ್ಲಿ ಸಿಎಂ ಕುರ್ಚಿ ಸಿಗುವ ಸಾಧ್ಯತೆಯಿದೆ.
ಗೋವಿಂದ್ ಕಾರಜೋಳ ಹೆಸರೂ ಕೇಳಿ ಚಾಲ್ತಿಯಲ್ಲಿ
ಜಿಲ್ಲೆಯ ಮತ್ತೊಬ್ಬ ನಾಯಕ, ಈಗಾಗಲೇ ಡಿಸಿಎಂ ಆಗಿರುವ ಮುಧೋಳ ಶಾಸಕ ಗೋವಿಂದ ಕಾರಜೋಳ ಹೆಸರು ಕೂಡ ಮುನ್ನಲೆಗೆ ಬಂದಿದ್ದು, ಕಾರಜೋಳ ಯಡಿಯೂರಪ್ಪನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆಡಳಿತಾತ್ಮಕವಾಗಿ ಅನುಭವ ಹೊಂದಿರುವ ಹಿರಿಯ ರಾಜಕಾರಣಿ ಹಾಗೂ ದಲಿತ ಸಮುದಾಯದ ಮುಖಂಡರಾಗಿದ್ದಾರೆ. ಹಿಂದುಳಿದ ವರ್ಗದವರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವ ಲೆಕ್ಕಾಚಾರ ಇದ್ದಿದ್ದೇ ಆದರೆ, ಕಾರಜೋಳ ಅವರಿಗೆ ಅದೃಷ್ಟ ಖುಲಾಯಿಸಬಹುದು ಎನ್ನಲಾಗುತ್ತಿದೆ.
ಕಾರಜೋಳ ಅವರು ದಲಿತ ಮುಖಂಡರಾಗಿದ್ದು, ಸಿಎಂ ಆಗಿ ನೇಮಕ ಮಾಡಿದಲ್ಲಿ ಬಿಜೆಪಿ ಪಕ್ಷಕ್ಕೆ ದಲಿತರನ್ನು ಓಲೈಸುವ ತಂತ್ರ ಮಾಡಬಹುದು. ಅಲ್ಲದೇ, ಪಕ್ಷದಿಂದ ದಲಿತರಿಗೆ ಸಿಎಂ ಸ್ಥಾನ ನೀಡುವುದು ಇತಿಹಾಸವಾಗಲಿದೆ.
ಅಚ್ಚರಿ ಎನ್ನುವಂತೆ ವೀರಣ್ಣ ಚರಂತಿಮಠ ಹೆಸರು ಕೂಡ ಮುನ್ನೆಲೆಗೆ
ಇನ್ನು ವರಿಷ್ಠರ ಚಿಂತನೆಗಳ ಪ್ರಕಾರ, ಉತ್ತರ ಕರ್ನಾಟಕ ಮೂಲದ ಹಿಂದುತ್ವ ಪ್ರತಿಪಾದಿಸುವ, ಪಕ್ಷನಿಷ್ಠೆ ಜೊತೆಗೆ ಪಕ್ಷದಲ್ಲಿ ಯಾವುದೇ ವಿರೋಧಿಗಳನ್ನ ಹೊಂದಿರದ ಹೊಸ ಮುಖದ ಹುಡುಕಾಟದಲ್ಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಚ್ಚರಿ ಎನ್ನುವಂತೆ ವೀರಣ್ಣ ಚರಂತಿಮಠ ಹೆಸರು ಕೂಡ ಮುನ್ನೆಲೆಗೆ ಬಂದಿದೆ.
ವೀರಣ್ಣ ಚರಂತಿಮಠ ಸಂಘ ಪರಿವಾರ ಹಾಗೂ ಹಿಂದುತ್ವದ ಪ್ರತಿಪಾದಿಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಆರ್ಎಸ್ಎಸ್ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಚರಂತಿಮಠ, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಬಿವಿವಿಎಸ್ ಶಿಕ್ಷಣ ಸಂಸ್ಥೆಯ ಮೂಲಕ ಉತ್ತಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ವೀರಣ್ಣ ಚರಂತಿಮಠ ಹೆಸರು ಸಂಘ ಪರಿವಾರದಲ್ಲಿ ಮುನ್ನಲೆಗೆ ಬಂದಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೇ ಮೂವರ ಹೆಸರುಗಳು ಕೇಳಿ ಬರುತ್ತಿದೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಇಬ್ಬರೂ ಜಿಲ್ಲೆಯವರೇ ಆಗಿದ್ದು, ಸಿಎಂ ಸ್ಥಾನ ಕೂಡ ಒಲಿದು ಬಂದರೆ ಬಾಗಲಕೋಟೆ ಜಿಲ್ಲೆ ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ.