ಬಾಗಲಕೋಟೆ : ಕೊರೊನಾ ಭೀತಿಯಿಂದ ಸ್ತಬ್ಧವಾಗಿದ್ದ ಮಾರುಕಟ್ಟೆಗಳು ಬಹುತೇಕ ಕಡೆ ಈಗ ಪುನಾರಂಭವಾಗಿವೆ. ಆದರೆ ನವನಗರದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗಳು ಮಾತ್ರ ಇನ್ನೂ ಪ್ರಾರಂಭವಾಗದೇ ಇರುವುದರಿಂದ ಜನತೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಲಾಕ್ ಡೌನ್ ಅನ್‍ಲಾಕ್ ಆದ ಬಳಿಕ ಕೆಲವು ಕಡೆ ಸಂತೆಗಳು, ಆರಂಭವಾಗಿದೆ ಆದರೆ ನವನಗರ ಸೆಕ್ಟರ್ ನಂ.4 ಹಾಗೂ ಸೆಕ್ಟರ್ ನಂ 31 ರಲ್ಲಿ, ಪ್ರತಿ ಭಾನುವಾರ, ಗುರುವಾರ ನಡೆಯುತ್ತಿದ್ದ ಸಂತೆ ಇನ್ನೂ ಪ್ರಾರಂಭವಾಗಿಲ್ಲ. ಲಾಕ್ ಡೌನ್ ನಲ್ಲಿ ಸ್ತಬ್ಧವಾಗಿದ್ದ ಸಂತೆ ಇನ್ನೂ ತೆರೆಯುತ್ತಿಲ್ಲ. ಇದರಿಂದ ತರಕಾರಿ ಸೇರಿದಂತೆ ಇತರ ಸಾಮಗ್ರಿಗಳನ್ನು ಖರೀದಿಸಲು ಗ್ರಾಹಕರು ಪರದಾಡುತ್ತಿದ್ದರೆ, ವ್ಯಾಪಾರಸ್ಥರಿಗೆ ಒಂದೆಡೆ ಕುಳಿತುಕೊಂಡು ವ್ಯಾಪಾರ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಓದಿ:ಬಯಲು ಶೌಚಕ್ಕೆ ತೆರಳಿದಾಗ ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ: ಆರೋಪಿ ಬಂಧನ
ವಿಶಾಲವಾದ ಮಾರುಕಟ್ಟೆ ಸ್ಥಳವಿದ್ದರೂ, ಉಪಯೋಗ ಇಲ್ಲದೆ ಹಾಳಾಗುತ್ತಿದೆ. ಕನಿಷ್ಠ ತರಕಾರಿಯನ್ನು ಮಾರಾಟ ಮಾಡಲು ಅವಕಾಶ ನೀಡಿದರೆ ಇಲ್ಲಿ ಹಳ್ಳಿಯಿಂದ ಹಾಗೂ ಇತರೆ ಭಾಗದಿಂದ ತರಕಾರಿ ಮಾರಾಟ ಮಾಡಲು ಬರುವುದರಿಂದ ಕಡಿಮೆ ದರದಲ್ಲಿ ತರಕಾರಿ ನವನಗರದ ನಿವಾಸಿಗಳಿಗೆ ಸಿಗಲಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸೆಕ್ಟರ್ ನಂ.4ರಲ್ಲಿ ತರಕಾರಿಯನ್ನಾದರೂ ಮಾರಾಟ ಮಾಡಲು ಅನುಮತಿ ಕೊಡಬೇಕು ಎಂಬುದು ನವನಗರದ ಜನರ ಮನವಿಯಾಗಿದೆ.