ಬಾಗಲಕೋಟೆ: ಪ್ರವಾಹದಿಂದ ಹಾನಿಯಾಗಿರುವ ಮುಧೋಳ-ಯಾದವಾಡ ಸೇತುವೆ ಎರಡು ತಿಂಗಳು ಕಳೆದರೂ ಕಾಮಗಾರಿ ನಡೆಯದ ಪರಿಣಾಮ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದಲ್ಲಿ ಪ್ರವಾಹದಿಂದ ಯಾದವಾಡಗೆ ಸಂಚಾರ ಕಲ್ಪಿಸುವ ಸೇತುವೆ ಸಂಪೂರ್ಣ ಕುಸಿದು ಹಾಳಾಗಿತ್ತು. ಉತ್ತೂರು, ಒಂಟಗೋಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನತೆಗೆ ಮುಧೋಳಕ್ಕೆ ಸಂಚಾರ ಕಲ್ಪಿಸುತ್ತಿದೆ.
ಸೇತುವೆ ಕುಸಿತದಿಂದಾಗಿ ಮುಧೋಳಕ್ಕೆ 20 ಕಿಲೋಮೀಟರ್ ಸುತ್ತಿಕೊಂಡು ಬರುವ ಅನಿವಾರ್ಯತೆ ಎದುರಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ. ಲೋಕೋಪಯೋಗಿ ಸಚಿವ ಹಾಗೂ ಡಿಸಿಎಂ ಹುದ್ದೆಯಲ್ಲಿರುವ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿಯೇ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಾಗಿತ್ತು. ಆದರೆ, ಇಕ್ಕಟ್ಟಿನ ಸ್ಥಳ ಇರುವ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆಯು ಎರಡು ತಿಂಗಳ ಸಂಪೂರ್ಣ ಕಾಮಗಾರಿ ಮುಗಿದು ಪುನರ್ಚಾಲನೆ ನೀಡಲಾಗಿದೆ.