ಬಾಗಲಕೋಟೆ: ಮೃತಪಟ್ಟ ಅನಾಥ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಯುವಕನೊಬ್ಬ ಜಮಖಂಡಿ ಪಟ್ಟಣದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾನೆ.
ಶೈಲೇಶ್ ಆಪ್ಟೆ ಎಂಬ ಯುವಕ ಲಾಕ್ಡೌನ್ ಸಮಯದಲ್ಲಿ ವೃದ್ಧೆ ವಿಜಯಾ ಯಾದವಾಡ (78) ಅವರಿಗೆ ಆಹಾರ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದ. ಅಂದಿನಿಂದ ಈ ವೃದ್ಧೆಗೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದ.
ಲಾಕ್ಡೌನ್ನಲ್ಲಿ ಆಹಾರ ಪದಾರ್ಥ ವಿತರಿಸುವಾಗ ಹಿಂದೂ ಕಾರ್ಯಕರ್ತ ಶೈಲೇಶ್ ಆಪ್ಟೆಯೊಂದಿಗೆ ವೃದ್ಧೆ ತನ್ನ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದ ವೃದ್ಧೆಗೆ ಔಷಧ ಮತ್ತು ಊಟದ ಖರ್ಚನ್ನು ಮೂರು ತಿಂಗಳ ಕಾಲ ಶೈಲೇಶ್ ಅವರೇ ಭರಿಸಿದ್ದರು.
ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವಿಜಯಾ ಅನಾರೋಗ್ಯದಿಂದ ಮೃತಪಟ್ಟರು. ಅವರಿಗೆ ಬಂಧು-ಬಳಗ ಇಲ್ಲದ ಹಿನ್ನೆಲೆ ಈ ಯುವಕನೇ ಹೆಗಲು ಕೊಟ್ಟು ಅಂತ್ಯಕ್ರಿಯೆ ವೆಚ್ಚ ಭರಿಸಿ ಅಂತಿಮ ವಿಧಿ ವಿಧಾನ ಪೂರೈಸಿದ್ದಾನೆ.