ಬಾಗಲಕೋಟೆ: ರೈತ ವರ್ಷವಿಡೀ ದುಡಿದು ಸಾಲ-ಸೋಲ ಮಾಡಿ ಕೈಸುಟ್ಟುಕೊಳ್ಳುವುದನ್ನೇ ಹೆಚ್ಚಾಗಿ ಕೇಳಿರುವ ನಮಗೆ ಕೃಷಿಯಲ್ಲಿಯೂ ಉತ್ತಮ ಲಾಭ ಗಳಿಸಬಹುದು ಎಂಬುದನ್ನು ಜಿಲ್ಲೆಯ ಬಾದಾಮಿ ತಾಲೂಕಿನ ರೈತರು ತೋರಿಸಿದ್ದಾರೆ.
ಬಾದಾಮಿ ತಾಲೂಕಿನ ವಿವಿಧೆಡೆ ಸುಮಾರು 200 ಎಕರೆ ಪ್ರದೇಶದಲ್ಲಿ ರೈತರು ಚೆಂಡು ಹೂವು ಬೆಳೆದಿದ್ದಾರೆ. ಬನಶಂಕರಿಯಿಂದ ಬೇಲೂರು ಗ್ರಾಮಕ್ಕೆ ಹೋಗುವ ಮಾರ್ಗ ಚೆಂಡು ಹೂವುಗಳಿಂದ ಕಂಗೊಳಿಸುತ್ತಿದೆ.
ಖಾಸಗಿ ಕಂಪನಿಯವರು ರೈತರಿಗೆ ಬೀಜ, ಗೊಬ್ಬರ ನೀಡಿ ಪ್ರತಿ ಕೆಜಿ ಗೆ 10 ರೂ.ಗಳಂತೆ ಖರೀದಿಸುತ್ತಾರೆ. ತಿಪಟೂರಿನ ಖಾಸಗಿ ಕಂಪನಿಯವರು ಇಲ್ಲಿಗೆ ಆಗಮಿಸಿ, ಲಾರಿಗಳ ಮೂಲಕ ಹೂವುಗಳನ್ನು ತುಂಬಿಕೊಂಡು ಹೋಗುತ್ತಾರೆ. ರೈತರು ಒಂದು ಎಕರೆಗೆ ಸುಮಾರು 40-50 ಸಾವಿರ ರೂ. ಲಾಭ ಪಡೆಯಬಹುದು. ಇದು ಕೇವಲ ನಾಲ್ಕು ತಿಂಗಳ ಬೆಳೆಯಾಗಿರುವುದರಿಂದ ಈ ಭಾಗದ ರೈತರು ಹೆಚ್ಚಾಗಿ ಚೆಂಡು ಹೂವನ್ನೇ ಬೆಳೆದಿದ್ದಾರೆ.
15 ದಿನದಲ್ಲಿ ದಸರಾ ಹಬ್ಬ ಬಂದ ಹಿನ್ನೆಲೆ ಹೂವಿನ ಬೇಡಿಕೆ ಹೆಚ್ಚಾಗಲಿದೆ. ಹಬ್ಬದ ದಿನದಂದು ಮಾತ್ರ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ನಂತರ ಬೇಡಿಕೆ ಇರುವುದಿಲ್ಲ. ಈ ಹಿನ್ನೆಲೆ ಖಾಸಗಿ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು, ಸಾವಿರಾರು ರೂ. ಲಾಭ ಪಡೆಯಬಹುದು ಎಂದು ಬಾದಾಮಿ ತಾಲೂಕಿನ ಚಿಕ್ಕನಸೀಬಿ ಗ್ರಾಮದ ರೈತ ಮಲ್ಲಪ್ಪ ಎಂಬುವರು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.