ಬಾಗಲಕೋಟೆ : ಉತ್ತರ ಕರ್ನಾಟಕ ಧಾರ್ಮಿಕ ಕೇಂದ್ರ ಹಾಗೂ ಐತಿಹಾಸಿಕ ಸ್ಥಳ ಬಾದಾಮಿ ಶ್ರೀ ಬನಶಂಕರಿ ದೇವಾಲಯವು ಕೊರೊನಾ ವೈರಸ್ ಭೀತಿಯಿಂದ ಕಳೆದ ಐವತ್ತು ದಿನಗಳಿಂದ ಬಂದ ಆಗಿದೆ. ಇದರಿಂದ ಪ್ರತಿ ತಿಂಗಳು ಬರುತ್ತಿದ್ದ ಲಕ್ಷಾಂತರ ರೂ. ಆದಾಯ ಸ್ಥಗಿತಗೊಂಡಿದೆ. ಅರ್ಚಕರು ಹಾಗೂ ಟ್ರಸ್ಟ್ನವರು ಇದರಿಂದ ಪರದಾಡುವಂತಹ ಸ್ಥಿತಿ ಎದುರಾಗಿದೆ.
ಪ್ರತಿ ವರ್ಷ ಜನವರಿ ತಿಂಗಳ ಬನದ ಹುಣ್ಣಿಮೆ ದಿನದಂದು ಜಾತ್ರೆ ನಡೆಯುತ್ತದೆ. ಒಂದು ತಿಂಗಳ ಕಾಲ ಮನರಂಜನೆ ಜಾತ್ರೆ ಎಂದು ವಿಶೇಷವಾಗಿರುವ ಈ ದೇವಾಲಯಕ್ಕೆ ರಾಜ್ಯ ಸೇರಿದಂತೆ, ಮಹಾರಾಷ್ಟ್ರ, ಆಂಧ್ರ ಹಾಗೂ ಗೋವಾ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ಮಾರ್ಚ್ 23ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧ ಮಾಡಲಾಗಿದೆ. ಆಗಿನಿಂದ ಈವರೆಗೂ ಯಾವ ಭಕ್ತರೂ ಸಹ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ಇಲ್ಲ. ಹೀಗಾಗಿ ಪ್ರತಿ ತಿಂಗಳು ಬರುತ್ತಿದ್ದ ಆದಾಯ ಸ್ಥಗಿತವಾಗಿದೆ.
ವಾರ್ಷಿಕವಾಗಿ 1 ರಿಂದ 2 ಕೋಟಿ ಆದಾಯ ಬರುತ್ತದೆ. ಈ ಬಾರಿ ವಾರ್ಷಿಕ ಆದಾಯದಲ್ಲಿ ಭಾರಿ ಕಡಿಮೆ ಆಗಲಿದೆ. ಒಟ್ಟು ಆರು ಅರ್ಚಕರ ಕುಟುಂಬ ಇದ್ದು, ಪ್ರತಿ ವರ್ಷ ಒಂದು ಕುಟುಂಬ ಪಾಳಿಯಂತೆ ಪೂಜೆಯಲ್ಲಿ ತೊಡಗಿರುತ್ತಾರೆ. ಆ ವರ್ಷ ಆದಾಯ ಅವರಿಗೆ ಸೇರುತ್ತೆ. ಆದಾಯದಲ್ಲಿ ಕಟ್ಟಡ ನಿರ್ಮಾಣ, ಮೂಲಭೂತ ಸೌಲಭ್ಯ ಸೇರಿ ಇತರ ವೆಚ್ಚಗಳು ನೀಡಿ ಉಳಿದ ಹಣ ಅರ್ಚಕರ ಆದಾಯವಾಗಲಿದೆ.
ಒಂದು ಕುಟುಂಬದ ಅರ್ಚಕರು ಮರಳಿ ಪೂಜೆಯ ಪಾಳೆ ಬರಬೇಕಾದರೆ, ಐದು ವರ್ಷ ನಂತರ, ಒಂದು ಕುಟುಂಬದವರು ಒಂದು ವರ್ಷದ ಆದಾಯವೇ ಐದು ವರ್ಷದವರೆಗೆ ಮನೆಯಲ್ಲಿ ಕುಳಿತು ಜೀವನ ನಡೆಸುತ್ತಾರೆ. ಪ್ರತಿ ವರ್ಷ ಅಕ್ಷಯ ತೃತೀಯ ಅಮಾವಾಸ್ಯೆ ಮುನ್ನ ದಿನ ಅಂದರೆ ಈ ಬಾರಿ ಏಪ್ರೀಲ್ 23ರ ನಂತರ ಒಂದು ಕುಟುಂಬದ ಅರ್ಚಕ ಪೂಜಾ ಅವಧಿ ಮುಗಿದು, ಮತ್ತೊಬ್ಬರ ಅರ್ಚಕರ ಕುಟುಂಬದವರ ಸರದಿ ಪ್ರಾರಂಭವಾಗುತ್ತದೆ.
ಆದರೆ, ಈ ಬಾರಿ ಹೊಸದಾಗಿ ಸರದಿ ಬರುವ ಅರ್ಚಕರು, ಲಾಕ್ಡೌನ್ ಪರಿಣಾಮ ಸೂಕ್ತ ಆದಾಯ ಬರದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಾದಾಮಿ ಬನಶಂಕರಿ ದೇವಾಲಯಕ್ಕೆ ಶಾಲಾ, ಕಾಲೇಜ್ ರಜೆ ಹಿನ್ನೆಲೆ ಮಾರ್ಚ್‌ದಿಂದ ಮೇವರೆಗೆ ಪ್ರವಾಸಿಗರು, ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದು, ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿ ದೇವಿಯ ದರುಶನ ಪಡೆದುಕೊಂಡು ಹೋಗುತ್ತಿದ್ದರು.
ಇಂತಹ ಸಮಯದಲ್ಲಿ ತೆಂಗಿನಕಾಯಿ, ಕುಂಕುಮ, ಹೂ-ಹಣ್ಣು, ಟೀ ಹೋಟೆಲ್ ಸೇರಿ ಇತರ ಚಿಕ್ಕಪುಟ್ಟ ಉದ್ಯೋಗ ಸಹ ನಡೆಯುತ್ತಿದ್ದವು. ಈಗ ಸಂಪೂರ್ಣ ಬಂದ ಆಗಿರುವ ಪರಿಣಾಮ ಸಣ್ಣಪುಟ್ಟ ಉದ್ಯೋಗ ನಂಬಿದ ನೂರಾರು ಕುಟುಂಬದವರು ಬೀದಿ ಪಾಲಾಗಿದ್ದಾರೆ. ಯಾವಾಗ ಮತ್ತೆ ದೇವಾಲಯ ಪ್ರಾರಂಭವಾಗಿ ಎಲ್ಲವೂ ಮೊದಲಿನಂತೆ ನಡೆಯುತ್ತದೆ ಎಂದು ಭಕ್ತರು, ಸ್ಥಳೀಯ ಉದ್ಯೋಗಿಗಳು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ.
ಬನಶಂಕರಿ ದೇವಿಗೆ ಪ್ರತಿ ನಿತ್ಯ ನಡೆಯುತ್ತಿರುವ ಪೂಜೆ, ಪುನಸ್ಕಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಅರ್ಚಕರು ಮಾತ್ರ ಪ್ರತಿ ನಿತ್ಯ ದೇವಿಗೆ ಪೂಜೆ ನಡೆಸುತ್ತಿದ್ದಾರೆ. ಅಲ್ಲದೆ ಕೊರೊನಾ ವೈರಸ್ ನಿಯಂತ್ರಣವಾಗಿ ಎಲ್ಲವೂ ಮೊದಲಿನಂತೆ ಆಗಲಿ ಎಂದು ದೇವಿಗೆ ಅರ್ಚಕರು ವಿಶೇಷವಾಗಿ ಗರ್ಭ ಗುಡಿಯಲ್ಲಿ ಪೂಜೆ ಮಾಡುತ್ತಿರುತ್ತಾರೆ. ಕೊರೊನಾ ರೋಗವು ದೇವಾಲಯಗಳ ಮೇಲಿನ ಆದಾಯದ ಮೇಲೂ ಪರಿಣಾಮ ಬೀರಿದೆ. ಪ್ರತಿ ತಿಂಗಳು ಬರುತ್ತಿದ್ದ ಲಕ್ಷಾಂತರ ರೂ. ಆದಾಯ ಇಲ್ಲದೆ ಅರ್ಚಕರ ಸ್ಥಿತಿ ಚಿಂತಾಜನಕವಾಗಿದೆ.