ಬಾಗಲಕೋಟೆ: ಕಾಣೆಯಾದ ಪ್ರೇಮಿಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೇಮಿಗಳನ್ನು ಮರ್ಯಾದಾ ಹತ್ಯೆ ಮಾಡಿರುವ ಪ್ರಕರಣ ಪೊಲೀಸರ ತನಿಖೆಯಿಂದೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದಲ್ಲಿ ಮಗಳ ಪ್ರೀತಿಗೆ ಅಡ್ಡಿಯಾಗಿದ್ದ ಪೋಷಕರು, ಕುಟುಂಬಸ್ಥರು ಅಪ್ರಾಪ್ತೆ ಹಾಗೂ ಹುಡುಗಿಯ ಪ್ರಿಯತಮನನ್ನು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಅ.1ರಂದು ಪ್ರೇಮಿಗಳ ಕೊಲೆ: ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೇವಿನಮಟ್ಟಿ ಗ್ರಾಮದ ಅಪ್ರಾಪ್ತೆ ಮತ್ತು ಆಕೆಯ ಪ್ರಿಯತಮ ವಿಶ್ವನಾಥ ನೆಲಗಿ (22) ಕೊಲೆಯಾದ ಪ್ರೇಮಿಗಳು. ಹುಡುಗಿಯ ತಂದೆ, ಸಹೋದರರು, ಮಾವಂದಿರು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಕ್ಟೋಬರ್ 1 ರಂದು ಬೆಳಗ್ಗೆ 3 ರಿಂದ 4 ಗಂಟೆ ಮಧ್ಯೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ವಾಹನದಲ್ಲಿ ಕರೆದೊಯ್ದು ಕೊಲೆ: ಬಾಲಕಿ ಕತ್ತನ್ನು ವೇಲ್ನಿಂದ ಬಿಗಿದು ಕೊಲೆ ಮಾಡಲಾಗಿದೆ. ವಿಶ್ವನಾಥ ನೆಲಗಿಯ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಇಬ್ಬರನ್ನು ಒಂದು ಮಾಡುವುದಾಗಿ ನಂಬಿಸಿ, ಟಾಟಾ ಏಸ್ ಹಾಗೂ ಬೊಲೆರೊ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ನರಗುಂದ ಬಳಿ ಇದ್ದ ವಿಶ್ವನಾಥನನ್ನು ಕರೆಯಿಸಿ, ಒಂದು ಮಾಡೋದಾಗಿ ಬೇವಿನಮಟ್ಟಿ ಗ್ರಾಮದಿಂದ ಕರೆದೊಯ್ದಿದ್ದಾರೆ.
ರವಿ ಹುಲ್ಲಣ್ಣವರ (19), ಹನುಮಂತ ಮಲ್ನಾಡದ (22), ಬೀರಪ್ಪ ದಳವಾಯಿ(18) ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತೆಯ ಅಣ್ಣ, ಹನುಮಂತ, ಬೀರಪ್ಪ ಹುಡುಗಿಯ ಮಾವಂದಿರು ಎಂದು ತಿಳಿದುಬಂದಿದೆ. ಇಬ್ಬರನ್ನು ಕೊಲೆಗೈದು ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಶವ ಎಸೆದಿದ್ದಾರೆ ಎನ್ನಲಾಗ್ತಿದೆ.
ಕಾಣೆಯಾದ ಬಗ್ಗೆ ದೂರು: ಶವದ ಗುರುತು ಸಿಗಬಾರದೆಂದು ಒಳ ಉಡುಪು ಹೊರತುಪಡಿಸಿ, ಬಟ್ಟೆ ಬಿಚ್ಚಿ ಎಸೆದಿದ್ದಾರೆ. ನಂತರ ಅಕ್ಟೋಬರ್ 11 ರಂದು ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಹುಡುಗಿ ತಂದೆ ದೂರು ನೀಡಿದ್ದಾರೆ. ಅಕ್ಟೋಬರ್ 3 ರಂದು ಮಗ ಕಾಣೆ ಆಘಿದ್ದಾನೆ ಅಂತ ಗದಗ ಜಿಲ್ಲೆ ನರಗುಂದ ಠಾಣೆಯಲ್ಲಿ ವಿಶ್ವನಾಥ ತಂದೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ
ಅಕ್ಟೋಬರ್15 ರಂದು ಸಂಶಯ ಬಂದ ಹಿನ್ನೆಲೆ ಬಾಲಕಿಯ ಅಣ್ಣನನ್ನು ವಶಕ್ಕೆ ಪಡೆದು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಬಳಿಕ ಆಕೆಯ ಸಹೋದರ, ಆರೋಪಿಗಳಾದ ಹನುಮಂತ ಮಲ್ನಾಡದ, ಬೀರಪ್ಪ ದಳವಾಯಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಆದರೆ ಇದುವರೆಗೂ ಇಬ್ಬರ ಶವಗಳು ಪತ್ತೆಯಾಗಿಲ್ಲ. ಪೊಲೀಸರಿಂದ ತನಿಖೆ ನಡೆಸಲಾಗುತ್ತದೆ.
ಮೋಸ ಮಾಡಿ ಕರೆಸಿಕೊಂಡು ಕೊಲೆ: ಪ್ರೇಮಿಗಳನ್ನು ಒಂದು ಮಾಡುವುದಾಗಿ ನಂಬಿಸಿ ಇಬ್ಬರನ್ನು ಕೊಲೆ ಮಾಡಿರುವ ಮೂವರು ಆರೋಪಿ ಹಾಗೂ ಕೊಲೆಗೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.
ಇಬ್ಬರು ಪ್ರೀತಿ ಮಾಡುತ್ತಿರುವ ಬಗ್ಗೆ ಗೊತ್ತಾದಾಗ ಬಾಲಕಿಯ ಕಡೆಯವರು ಇಬ್ಬರಿಗೂ ಹಲವು ಬಾರಿ ತಿಳುವಳಿಕೆ ನೀಡಿದ್ದರು. ಕೆಲವು ದಿನಗಳ ಕಾಲ ದೂರವಾಗಿದ್ದ ಅವರು ಬಳಿಕ ಪೋನ್ ಮೂಲಕ ಮತ್ತೆ ಹತ್ತಿರವಾಗಿದ್ದರು. ಮದುವೆಯಾದರೆ ಅವನನ್ನೇ ಮದುವೆಯಾಗುವುದಾಗಿ ಬಾಲಕಿಯು ಪಟ್ಟು ಹಿಡಿದಿದ್ದಳು. ಇದರಿಂದ ಆ ಯುವಕನ ಜೊತೆ ನಿನ್ನ ಮದುವೆ ಮಾಡಿಸುವುದಾಗಿ ಹೇಳಿದ ಆಕೆಯ ಸಂಬಂಧಿ ಮೋಸ ಮಾಡಿ ಕರೆಸಿಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.