ಬಾಗಲಕೋಟೆ: ಇಂದಿನ ರಾಜಕಾರಣ ಅಂದರೆ ತಂತಿ ಮೇಲೆ ನಡೆದ ಹಾಗೆ. ರಾಜಕಾರಣದಲ್ಲಿ ಕಬಡ್ಡಿಯೂ ಗೊತ್ತಿರಬೇಕು ಹಾಗೇ ಚದುರಂಗದ ಆಟವೂ ಗೊತ್ತಿರಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಸಿಎಂ ಸ್ಥಾನಕ್ಕಾಗಿ ಕಿತ್ತಾಡುತ್ತಿದ್ದಾರೆ. ವಿಪಕ್ಷಗಳ ನಡವಳಿಕೆ ಬೀದಿ ನಾಟಕವಾಗಿದೆ ಎಂದು ವ್ಯಂಗ್ಯವಾಡಿದರು.
ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದೆ. ರಾಜ್ಯದಲ್ಲಿ ಯಡಿಯೂರಪ್ಪ ಹಾದಿಯಲ್ಲಿ ಬೊಮ್ಮಾಯಿ ಸಾಗುತ್ತಿದ್ದಾರೆ. ತುಳಿತಕ್ಕೆ ಒಳಗಾದ ಜನಾಂಗವನ್ನು ಮೇಲೆತ್ತುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿ, ತಂದೆಯವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವ್ಯಾರು ಸ್ಪರ್ಧೆ ಮಾಡಲ್ಲ. ನೀವೇ ಸ್ಪರ್ಧಿಸಬೇಕು. ಇಲ್ಲದಿದ್ದರೆ ವಿಜಯೇಂದ್ರ ಅವರನ್ನ ನಿಲ್ಲಿಸಬೇಕೆಂದು ಕ್ಷೇತ್ರದ ಬಿಜೆಪಿ ಮುಖಂಡರು ಆಗ್ರಹ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ತಂದೆಯವರು ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಬಿಜೆಪಿ ಪಕ್ಷದ ಅಭ್ಯರ್ಥಿ ಅಂತಿಮವಾಗಬೇಕಾದರೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ತೀರ್ಮಾನ ಮಾಡಬೇಕು. ಇದನ್ನೇ ಬಿಎಸ್ವೈ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಹಳೆ ಮೈಸೂರು ಭಾಗದಲ್ಲಿ ವಿಜಯೇಂದ್ರ ಬಗ್ಗೆ ನಿರೀಕ್ಷೆ ಇಟ್ಟಿರುವ ವಿಚಾರವಾಗಿ ಮಾತನಾಡಿ, ಯಾವೊಬ್ಬ ವ್ಯಕ್ತಿ ಒಂದು ಪ್ರದೇಶ ಅಥವಾ ಭಾಗದಲ್ಲಿ ಸ್ಫರ್ಧೆ ಮಾಡುವುದರರಿಂದ ಲಾಭ ಅಥವಾ ನಷ್ಟ ಎಂಬ ಪ್ರಶ್ನೆ ಇಲ್ಲ. ಬಿಜೆಪಿ ಸಂಘಟಿತ ಪಕ್ಷ. ಇಲ್ಲಿ ವ್ಯಕ್ತಿ ಪೂಜೆ ನಡೆಯೋದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರಾಜ್ಯಕ್ಕೆ ಒಳ್ಳೆಯ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಎಂದು ಹೇಳಿದರು.
ಜೆಡಿಎಸ್ 'ಪಂಚರತ್ನ ಯಾತ್ರೆ' ಬಗ್ಗೆ ಪ್ರತಿಕ್ರಿಯಿಸುತ್ತಾ, ಅದರಲ್ಲೇನಿದೆ?. ಪಾಪ ಚುನಾವಣೆ ಬಂತಲ್ಲ, ಎಲ್ಲ ರಾಜಕೀಯ ಪಕ್ಷಗಳೂ ಅವರದ್ದೇ ಆದ ತಂತ್ರಗಳನ್ನು ಮಾಡುತ್ತಾರೆ. ಆದರೆ ರಾಜ್ಯದ ಜನ ಪ್ರಜ್ಞಾವಂತರಿದ್ದಾರೆ. ಯಾರನ್ನು ಆಯ್ಕೆ ಮಾಡಿದರೆ ರಾಜ್ಯದಲ್ಲಿ ಅಭಿವೃದ್ಧಿ ಆಗುತ್ತದೆ ಎಂದು ಅವರಿಗೆ ಗೊತ್ತಿದೆ ಎಂದರು.
ಇದನ್ನೂ ಓದಿ: ಕ್ಷೇತ್ರದ ಬಗ್ಗೆ ಅಲ್ಲ, ಕರ್ನಾಟಕದ ಬಗ್ಗೆ ಒಲವಿದೆ: ಬಿ.ವೈ. ವಿಜಯೇಂದ್ರ