ಬಾಗಲಕೋಟೆ: ಶ್ರೀಮಳೆರಾಜೇಂದ್ರಸ್ವಾಮಿ ಲಕ್ಷದೀಪೋತ್ಸವ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಆಂಧ್ರದ ಕಂದಿಮಲ್ಯಪಲ್ಯ ವೀರ ಭೋಗ ವಸಂತ ವೆಂಕಟೇಶ ಮಹಾಸ್ವಾಮಿಗಳು ನುಡಿದರು.
ಸುಕ್ಷೇತ್ರ ಹೊಸ ಮುರನಾಳ ಗ್ರಾಮದಲ್ಲಿ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಲಕ್ಷದೀಪೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ದೀಪ ಬೆಳಗುವ ಮುಖಾಂತರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠಕ್ಕೆ ಹಾಗೂ ಪೋತಲುರು ವೀರಬ್ರಹ್ಮೇಂದ್ರಸ್ವಾಮಿಗಳ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಈ ಮಠವು ಕೂಡಾ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ. ಇಲ್ಲಿ ಮುಸ್ಲಿಂ ಮಹಿಳೆಯರು ಕೂಡಾ ದೀಪೋತ್ಸವದಲ್ಲಿ ಭಾಗವಹಿಸಿ ದೀಪಬೆಳಗಿಸಿದ್ದು ವಿಷೇಶವಾಗಿದೆ. ಅಲ್ಲದೆ ಇದು ಮಳೆ ಪರಂಪರೆ ಮಠವಾಗಿದ್ದು ಈ ಭಾಗದ ಹೆಮ್ಮೆ ಎಂದರು.
ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ದೀಪ ಬೆಳಗುವ ಮೂಲಕ ಲಕ್ಷದೀಪೋತ್ಸವಕ್ಕೆ ಹೆಚ್ಚು ಮೆರುಗು ತಂದರು.