ಬಾಗಲಕೋಟೆ:ಬಿಜೆಪಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಖಾತೆ ಹಂಚಿಕೆ ಮಾಡುವುದು ಇನ್ನಷ್ಟು ಕಗ್ಗಂಟಾಗಿ ಬಿಜೆಪಿ ಪಕ್ಷದ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡದೇ ಎಲ್ಲಾ ಖಾತೆಗಳನ್ನು ಒಬ್ಬರೇ ಇಟ್ಟುಕೊಂಡಿರುವ ಪರಿಣಾಮ, ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿದಿದೆ. ಎಲ್ಲಿಯೂ ಸಲ್ಲದವರು ನಮ್ಮಲ್ಲಿ ಸಲ್ಲುವುದು. ನಮ್ಮಲ್ಲಿ ಸಲ್ಲದವರು ಎಲ್ಲಿಯೂ ಸಲ್ಲವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಲ್ಲದವರು ಬೇರೆ ಕಡೆಗೆ ಸಲ್ಲುವುದಿಲ್ಲ. ಇದರಿಂದ ಮುಂದೆ ಬಿಜೆಪಿ ಪಕ್ಷಕ್ಕೆ ಗಂಡಾಂತರ ಇದೆ ಎಂದು ಕುಟುಕಿದರು.
ಸಚಿವ ಸಂಪುಟ ವಿಸ್ತರಣೆ ಇಲ್ಲದೆ ರಾಜ್ಯದ ಜನತೆಗೆ ತೊಂದರೆ ಉಂಟಾಗಿದೆ. ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಶೀಘ್ರ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಎಸ್ ಆರ್ ಪಾಟೀಲ್ ಒತ್ತಾಯಿಸಿದರು.
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಇನ್ನಷ್ಟು ನಾಯಕರು ಬಿಜೆಪಿ ಪಕ್ಷಕ್ಕೆ ಬರಲಿದ್ದಾರೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪಕ್ಷದವರು ಆಪರೇಶನ್ ಕಮಲ ಮಾಡಲು ನಿಸ್ಸೀಮರು ಎಂದು ವ್ಯಂಗ್ಯವಾಡಿದರು.