ಬಾಗಲಕೋಟೆ: ಕೃಷ್ಣ ಮೇಲ್ದಂಡೆ ಯೋಜನೆಯ 3 ನೇ ಹಂತದ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಅ.02 ರಂದು ಘಟಪ್ರಭಾ ನದಿಯಿಂದ ಕೃಷ್ಣ ನದಿವೆರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧಿ ನಡೆ ಕೃಷ್ಣೆಯ ಕಡೆ ಎಂಬ ನಿರ್ಣಾಯಕ ನಡಿಗೆ ಪ್ರಾರಂಭ ಆಗಲಿದೆ. ಕಳೆದ ಆರು ದಶಕಗಳಿಂದ ವಿಳಂಬ ಆಗಿರುವ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸುವ ಯಾವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಕಣ್ಣು ತೆರೆಸುವ ದೃಷ್ಟಿಯಿಂದ ನಾಡಿನ ಪರಮ ಪೂಜ್ಯರ ನೇತೃತ್ವದಲ್ಲಿ ಧರ್ಮಾತೀತ,ಜಾತ್ಯಾತೀತ ಹಾಗೂ ಪಕ್ಷಾತೀತ ಪಾದಯಾತ್ರೆಯನ್ನು ಪ್ರಾರಂಭ ಮಾಡಲಾಗುವುದು ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ 3ನೇ ಹಂತದಲ್ಲಿ 130 ಟಿಎಂಸಿ ನೀರಿನ ಸದ್ಬಳಕೆ ಆಗಬೇಕು. 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಬೇಕಾಗಿದೆ. ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಮನೆ - ಮಠ, ಆಸ್ತಿ - ಪಾಸ್ತಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ಸಿಗಬೇಕು ಎಂಬ ಬೇಡಿಕೆ ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯು ಶತಮಾನದ ಯೋಜನೆ ಆಗಬಾರದು ಎಂದರು.
ತೆಲಂಗಾಣದಲ್ಲಿ ಮೂರು ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ಕೋಟಿ ವೆಚ್ಚದ ನೀರಾವರಿ ಯೋಜನೆಯನ್ನು ಮುಕ್ತಾಯಗೊಳಿಸಲಾಗಿದೆ. ಈ ಯೋಜನೆಯಿಂದ ತೆಲಂಗಾಣದ 13 ಜಿಲ್ಲೆಗಳಿಗೆ ಅನುಕೂಲವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆ ಏಳು ಜಿಲ್ಲೆಗೆ ಸಂಬಂಧಿಸಿದೆ. ಈಗ 60 ಸಾವಿರ ಕೋಟಿ ವೆಚ್ಚ ಮಾಡಬೇಕಾಗಿದೆ ಎಂದು ಸರ್ಕಾರ ತಿಳಿಸಿದೆ. ತೆಲಂಗಾಣ ಸರ್ಕಾರದ ಮಾದರಿಯಲ್ಲಿ ನಮ್ಮ ಸರ್ಕಾರದ ತ್ವರಿತವಾಗಿ ಕಾಮಗಾರಿ ಮಾಡಬೇಕಾಗಿದೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಉತ್ತರ ಕರ್ನಾಟಕದವರಾಗಿದ್ದು, ಕೃಷ್ಣ ಮೇಲ್ದಂಡೆ ಯೋಜನೆ ತ್ವರಿತವಾಗಿ ತಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಭವಾನಿಪುರ by-polls: ಬೂತ್ ವಶಪಡಿಸಿಕೊಳ್ಳಲು TMC ಯತ್ನಿಸುತ್ತಿದೆ - BJP ಅಭ್ಯರ್ಥಿ ಪ್ರಿಯಾಂಕಾ ಆರೋಪ