ಬಾಗಲಕೋಟೆ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಬಾದಾಮಿ ಬನಶಂಕರಿ ದೇವಾಲಯದಲ್ಲಿ ನಾಳೆ (ಸೋಮವಾರ) ಬನದ ಹುಣ್ಣಿಮೆ ಪ್ರಯುಕ್ತ ಜಾತ್ರಾ ಮಹೋತ್ಸವ ನಡೆಯಲಿದೆ.
ಇದರ ಮುನ್ನಾ ದಿನ ಅಂದರೆ ಭಾನುವಾರ ದೇವಿಗೆ ಪಲ್ಲೇದ ಹಬ್ಬ ಎಂಬ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ವಿವಿಧ ಬಗೆಯ 108 ತರಕಾರಿ-ಹಣ್ಣುಗಳಿಂದ ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಲಿಂಬೆ ಹಣ್ಣು, ಈರುಳ್ಳೆ, ಗಜ್ಜರೆ, ಸೌತೆಕಾಯಿ, ನೆಲ್ಲಿಕಾಯಿ, ಶುಂಠಿ ಕೆಲವು ಬಗೆಯ ಹಸಿ ತಪ್ಪಲು ಬಾಜಿ, ಹೂ, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡಲಾಗಿತ್ತು. ನಂತರ ಅರ್ಚಕರು ಸೇರಿಕೊಂಡು, ಪೂಜೆ ಪುನಸ್ಕಾರ ನೆರವೇರಿಸಿದರು. ಈ ಪಲ್ಲೇದ ಹಬ್ಬ ಆಚರಣೆಗೆ ಒಂದು ಇತಿಹಾಸ ಇದೆ. ನೂರು ವರ್ಷಗಳ ಹಿಂದೆ ಮಳೆ ಇಲ್ಲದೆ ಬರಗಾಲ ಬಂದಾಗ, ಜನ ಊಟಕ್ಕಾಗಿ ಪರದಾಡುತ್ತಿದ್ದರು. ಆಗ ಋಷಿ ಮುನಿಗಳು ತಪಸ್ಸು ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಬರಗಾಲ ಹೋಗಲಾಡಿಸುವಂತೆ ಬೇಡಿ ಕೊಂಡಿದ್ದರಂತೆ.
ಆಗ ದೇವಿಯು ತನ್ನ ಮೈಯಿಂದ ತರಕಾರಿ, ಇತರ ಬೆಳೆಗಳು ಬರುವಂತೆ ಮಾಡಿ, ಭಕ್ತರಿಗೆ ನೀಡಿದ್ದಳಂತೆ. ನಂತರ ಭಕ್ತರೆಲ್ಲಾ ಸೇರಿ ಎಲ್ಲಾ ರೀತಿಯ ತರಕಾರಿ ಮಿಕ್ಸ್ ಮಾಡಿ, ದೇವಿಗೆ ನೈವೇದ್ಯ ಮಾಡಿದ್ದಾರೆ. ಅದೇ ಪರಂಪರೆಯನ್ನ ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಬೆಂಗಳೂರಿನ ಭಕ್ತರೊಬ್ಬರು ಸುಮಾರು 60 ಬಗೆಯ ವಿವಿಧ ತರಕಾರಿ ತಂದು ದೇವಿಯ ಪೂಜೆಗೆ ದಾನವಾಗಿ ನೀಡುವ ಮೂಲಕ ಭಕ್ತಿಯನ್ನು ಮೆರೆದಿದ್ದಾರೆ. ಒಂದು ಶುಂಠಿಯಲ್ಲಿ 60 ಬಗೆಯ ತರಕಾರಿಗಳು ಇರುತ್ತವೆ. ಇದರ ಜೊತೆಗೆ ನೆಲ್ಲಿಕಾಯಿಯಲ್ಲಿ 40 ಬಗೆಯ ತರಕಾರಿಗಳು ಇರುತ್ತವೆ. ಇವು ಎರಡು ಸೇರಿದರೆ ನೂರು ಬಗೆಯಾಗುತ್ತದೆ.
ಇದನ್ನೂ ಓದಿ: ನವ ಉದ್ಯಮದ ರಾಜ್ಯವನ್ನಾಗಿಸಲು ಬಿಯಾಂಡ್ ಬೆಂಗಳೂರು ಜಾರಿ: ಸಿಎಂ ಬೊಮ್ಮಾಯಿ
ಇದರ ಜೊತೆಗೆ ವಿವಿಧ ಬಗೆಯ ತರಕಾರಿಯನ್ನು ಸೇರಿಸಿ ಪೂಜೆ ಸಲ್ಲಿಸಲಾಯಿತು. ಆದರೆ ಇಂದು ವೀಕೆಂಡ್ ಕಪ್ಯೂ೯ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರಲಿಲ್ಲ, ಕೇವಲ ಅರ್ಚಕರು ಮಾತ್ರ ಸೇರಿ ಪೂಜೆ ಸಲ್ಲಿಸಿದರು. ನಾಳೆ ಜಾತ್ರೆ ಇದ್ದರೂ, ಜಾತ್ರೆ ಮಾಡದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ ಅರ್ಚಕರೆಲ್ಲಾ ಸೇರಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸುವ ಮಾದರಿಯಲ್ಲಿ ಮಾಡುತ್ತಾರೆ ಎಂದು ಬನಶಂಕರಿ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾದ ಮಲ್ಲಾರ್ ಭಟ್ ಪೂಜಾರ ತಿಳಿಸಿದ್ದಾರೆ.