ಬಾಗಲಕೋಟೆ: ಆಸ್ಟ್ರೇಲಿಯಾ ಪ್ರಜೆ ಮೇಲಿನ ಹಲ್ಲೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಚೈನೈನಲ್ಲಿರುವ ರಾಯಭಾರಿ ಕಚೇರಿಗೆ ನೀಡಿ, ಅವರ ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಕಳೆದ ವಾರದ ಹಿಂದೆ ಕೋಲ್ಹಾಪೂರದಲ್ಲಿ ಯೋಗ ವಿಕಾಸನ ಶಿಬಿರದಲ್ಲಿ ಭಾಗವಹಿಸಿದ್ದು, ಸದಾ ಏಕಾಂಗಿ ಆಗಿ ಸಂಚಾರ ಮಾಡುತ್ತಿದ್ದ ವಿಲಿಯಂ, ಬದಾಮಿಗೆ ಹೋಗುವಾಗ ಕೊಂಕಣಕೊಪ್ಪ ಗ್ರಾಮದಲ್ಲಿ ಸ್ಥಳೀಯ ಮನೆಯ ಮಾಡಿನ ಮೇಲೆ ರಾತ್ರಿ ವೇಳೆ ಕುಳಿತುಕೊಂಡಿದ್ದನ್ನು ನೋಡಿ ಹುಡುಗನೊಬ್ಬ ಭಯದಿಂದ ಮಾತನಾಡಿದ್ದು, ಆಗ ಮಾತಿನ ಚಕಮಕಿ ನಡೆದಿದ್ದು, ಆಗ ಸ್ಥಳೀಯರು ಕೈ ಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದರು.
ರಾತ್ರಿ ಸಮಯದಲ್ಲಿ ಮಾಹಿತಿ ಬಂದ ಹಿನ್ನೆಲೆ ಸಿಬ್ಬಂದಿ ಕಳುಹಿಸಿ, ಕರೆದುಕೊಂಡು ಚಿಕಿತ್ಸೆ ನೀಡಲಾಗಿದೆ. ಈಗ ಚೇತರಿಸಿಕೊಂಡಿದ್ದು, ಆರಾಮಾಗಿ ಇದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ತಿಳಿಸಿದರು. ಪ್ರತಿ ನಿತ್ಯ ಅವರ ಯೋಗ ಕ್ಷೇಮದ ಮಾಹಿತಿಯನ್ನು ರಾಯಭಾರಿ ಕಚೇರಿಗೆ ತಿಳಿಸಲಾಗಿದೆ ಎಂದರು.
ಇನ್ನು ಹಲ್ಲೆ ಆಗಿರುವ ಸಮಯದಲ್ಲಿ ಇದ್ದ ಬ್ಯಾಗ್ನಲ್ಲಿ ಹಣ, ವೀಸಾ,ಪಾಸ್‌ಪೋರ್ಟ್ ಸೇರಿದಂತೆ ಇತರ ದಾಖಲೆಗಳು ಇದ್ದು, ಎಲ್ಲವನ್ನು ಒಪ್ಪಿಸಲಾಗಿದೆ ಎಂದು ಎಸ್.ಪಿ.ಲೋಕೇಶ ತಿಳಿಸಿದರು.