ಬಾಗಲಕೋಟೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಶ್ರದ್ಧಾ ವಾಲ್ಕರ್ ಕೊಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಶ್ರದ್ಧಾಳನ್ನು ಕೊಲೆ ಮಾಡಿದ್ದ ಪ್ರಿಯಕರ ದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದ. ನಂತರ ದೇಹದ ಒಂದೊಂದೇ ಭಾಗಗಳನ್ನು ರಾತ್ರಿ ಸಾಗಿಸಿ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು. ಈಗ ಅಂತಹದ್ದೇ ಭೀಕರ ಮತ್ತು ಭಯಾನಕ ಕೊಲೆ ಕೇಸ್ ನಮ್ಮ ರಾಜ್ಯದಲ್ಲೂ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ.. ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿ ಪರಶುರಾಮ್ ಕುಳಲಿ (54)ಗೆ ವಿಠ್ಠಲ್ ಕುಳಲಿ (20) ಎಂಬ ಮಗನಿದ್ದಾನೆ. ಪ್ರತಿನಿತ್ಯ ಕುಡಿದು ಬರುತ್ತಿದ್ದ ಪರಶುರಾಮ್ ಮಗನ ಮೇಲೆ ಹಲ್ಲೆ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ, ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದರಂತೆ. ಇದರಿಂದ ಮಗ ವಿಠ್ಠಲ್ ರೋಸಿ ಹೋಗಿದ್ದ.
ತಂದೆ ಕೊಲೆಗೆ ಮುಹೂರ್ತ ಇಟ್ಟಿದ್ದ ಪುತ್ರ.. ಎಂದಿನಂತೆ ಡಿಸೆಂಬರ್ 6ರಂದು ಮದ್ಯ ಸೇವಿಸಿ ಪರಶುರಾಮ್ ಮನೆಗೆ ಬಂದಿದ್ದರು. ಈ ವೇಳೆ ಮಗನ ಜೊತೆ ಪರಶುರಾಮ್ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪದಲ್ಲಿ ವಿಠ್ಠಲ್ ರಾಡ್ನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಉಪಾಯವಾಗಿ ಶವವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮದೇ ಹೊಲಕ್ಕೆ ಸಾಗಿಸಿದ್ದಾನೆ. ಶವವನ್ನು ಬೋರ್ವೆಲ್ ಒಳಗೆ ಎಸೆಯಲು ಮುಂದಾಗಿದ್ದಾನೆ. ಆದ್ರೆ ಮೃತದೇಹ ಕೊಳವೆ ಬಾವಿಯೊಳಗೆ ಹೋಗಿಲ್ಲ. ಹೀಗಾಗಿ ಕೊಡಲಿಯಿಂದ ತಂದೆಯ ದೇಹವನ್ನು 30ಕ್ಕೂ ಅಧಿಕ ತುಂಡುಗಳನ್ನಾಗಿ ಮಾಡಿ ಕೊಳವೆ ಬಾವಿಗೆ ಎಸೆದಿದ್ದಾನೆ. ಕೊಳವೆ ಬಾವಿಯಿಂದ ದುರ್ನಾತ ಬರಲು ಆರಂಭಿಸಿದೆ. ಸ್ಥಳೀಯರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಆರೋಪಿ ವಿಠ್ಠಲ್ನನ್ನು ಬಂಧಿಸಿದ್ದಾರೆ.
ಪೊಲೀಸರು ಜೆಸಿಬಿಯಿಂದ ಕೊಳವೆಬಾವಿ ಅಗೆದು ದೇಹದ ತುಂಡುಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಓದಿ: ಆನೇಕಲ್ನಲ್ಲಿ ಹಿಟ್ ಆ್ಯಂಡ್ ರನ್.. ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು