ಬಾಗಲಕೋಟೆ: ನಗರದ ಮುಳುಗಡೆ ಪ್ರದೇಶದಲ್ಲಿರುವ ಒಬ್ಬಂಟಿ ವೃದ್ಧೆಯರು ಕೊರೊನಾ ಕಷ್ಟಕಾಲದಲ್ಲೂ ಪಡಿತರ ಆಹಾರ ಧಾನ್ಯ ಸಿಗದೆ ಪರದಾಡುತ್ತಿದ್ದಾರೆ. ಹಳೆ ಬಾಗಲಕೋಟೆಯ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಮಹಿಳೆಯರು ರೇಷನ್ ಸಿಗದೆ ತೊಂದರೆಗೆ ಒಳಗಾಗಿದ್ದಾರೆ. ಪಡಿತರ ಚೀಟಿ ಇದ್ದರೂ, ರೇಷನ್ ಸಿಗ್ತಿಲ್ಲ. ಕಾರಣ ಕೇಳಿದ್ರೆ ಪಡಿತರ ಚೀಟಿಯಲ್ಲಿ ನೀವು ಒಬ್ಬರೆ ಫಲಾನುಭವಿಗಳು ಇದ್ದೀರಿ, ಅದಕ್ಕೆ ಕೊಡಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ.
ಕೋವಿಡ್ ಸಮಯದಲ್ಲಿ ಬಡವರಿಗಾಗಿ ಸರ್ಕಾರ ರೇಷನ್ ವಿತರಣೆ ಮಾಡುವಂತೆ ಸೂಚಿಸಿದೆ. ಆದ್ರೆ ಒಂಟಿಯಾಗಿ ಜೀವಿಸುವ ಅಂಗವಿಕಲರು, ವಿಧವೆಯರು ಹಾಗೂ ವೃದ್ಧರಿಗೆ ಆಹಾರ ಧಾನ್ಯ ವಿತರಣೆ ಮಾಡಿಲ್ಲ. ಇದರಿಂದಾಗಿ 15ಕ್ಕೂ ಹೆಚ್ಚು ಒಬ್ಬಂಟಿ ಮಹಿಳಾ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ದೀಪಾವಳಿಯವರೆಗೆ ಉಚಿತವಾಗಿ ರೇಷನ್ ಕೂಡಲು ಆದೇಶ ಮಾಡಿದೆ. ಆದರೆ ಪಡಿತರ ವಿತರಕರು ಒಬ್ಬಂಟಿ ಫಲಾನುಭವಿಗಳಿಗೆ ರೇಷನ್ ನೀಡುತ್ತಿಲ್ಲ. ಇದರಿಂದ ರೋಸಿ ಹೋಗಿರುವ ಜನರು ರೇಷನ್ ಬದಲು ವಿಷವಾದ್ರೂ ಕೊಡಿ ಕುಡಿದು ಸಾಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಮಾಜಸೇವಕರು ಒಂಚೂರು ಇವರತ್ತ ಗಮನಹರಿಸಿ ಸಂಕಷ್ಟ ಪರಿಹರಿಸುವ ಕೆಲಸ ಮಾಡಲಿ ಎಂದು ಜನತೆ ಆಗ್ರಹಿಸಿದ್ದಾರೆ.