ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾದಾಮಿ ಮತಕ್ಷೇತ್ರದ ಪ್ರವಾಸವನ್ನು ಎರಡನೇ ದಿನವೂ ಮುಂದುವರೆಸಿದ್ದು, ಕೆರೂರು ಪಟ್ಟಣ ಹಾಗೂ ಮಾರ್ಗ ಮಧ್ಯದ 16 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 227 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯ ಕಾಮಗಾರಿಯನ್ನಿಂದು ಪರಿಶೀಲಿಸಿದರು.
ಸಿದ್ದರಾಮಯ್ಯನವರ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗಂಗೂಬಾಯಿ ಮೇಟಿಯವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು. ನಂತರ ಬಾದಾಮಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ಸಿದ್ದರಾಮಯ್ಯ ಹೆಸರು ವಿಚಾರವಾಗಿ ಪ್ರತಿಕ್ರಿಯಿಸಿ, ಇನ್ನೊಂದು ದೇಶದವರ ಬಗ್ಗೆ ಸ್ಪೈ ಕೆಲಸ ಮಾಡೋದು ಖಂಡನೀಯ. ಕೇಂದ್ರ ಸರ್ಕಾರ ಅಂತವರನ್ನು ಹತ್ತಿಕ್ಕಬೇಕು ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಬೇಕೆಂಬ ಕೂಗಿನ ಬಗ್ಗೆ ಮಾತನಾಡಿ, ಸದ್ಯಕ್ಕೆ ನಾನು ಬಾದಾಮಿ ಎಂಎಲ್ಎ... ಏನ್ರಿ ಚಿಮ್ಮನಕಟ್ಟಿ ಎಂದು ಬಾದಾಮಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಕಡೆ ನೋಡಿ ನಗೆ ಚಟಾಕಿ ಹಾರಿಸಿದರು. ಶಿರಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ ಎಂದರು.