ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಚುನಾವಣೆ ಸಮಯದಲ್ಲಿ ಮಹಿಳಾ ಸದಸ್ಯೆಯ ನೂಕಾಟ, ತಳಾಟ ಪ್ರಕರಣದಲ್ಲಿ ಶಾಸಕ ಸಿದ್ದು ಸವದಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ, ಮಹಾಲಿಂಗಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಇತರ ಮುಖಂಡರು ಭಾಗವಹಿಸಿ, ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದು ಸವದಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಹೆಣ್ಣು ಮಕ್ಕಳ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಗೊತ್ತಿಲ್ಲ ಅಂದರೆ ಶಾಸಕರಾಗುವುದಕ್ಕೆ ಯೋಗ್ಯರಲ್ಲ. ಸಂಸ್ಕಾರ ಇಲ್ಲದೆ ಶಾಸಕರಾಗಿರುವ ಸವದಿಯವರಿಗೆ, ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ಪುರಸಭೆ ಅಧಿಕಾರ ಹಿಡಿಯೋಕೆ ಮಾನ, ಮಾರ್ಯಾದೆ ಬಿಟ್ಟು ವರ್ತನೆ ಮಾಡಿದ್ದಕ್ಕೆ ಸುಮ್ಮನೆ ಇರಬೇಕಾ? ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ದಸ್ತಗಿರಿ ಮಾಡಬೇಕು. ದಲಿತ ಹೆಣ್ಣುಮಗಳ ಗರ್ಭಪಾತ ಆಗೋಕೆ ಸಿದ್ದು ಸವದಿ, ಅತನ ಚೇಲಾ ಗೂಂಡಾಗಳು ಕಾರಣ. ಇದು ಸಾಮಾನ್ಯ ಅಪರಾಧ ಅಲ್ಲ, ಮನುಷ್ಯರು ಮಾಡುವ ಕೃತ್ಯ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಮಾನುಷ ಕೃತ್ಯ ಎಲ್ಲಿಯೂ ಕೂಡಾ ನಡೆದಿಲ್ಲ. ಇಲ್ಲಿನ ಪೊಲೀಸರು, ಸಿದ್ದು ಸವದಿ ಜೊತೆ ಶಾಮೀಲಾಗಿದ್ದಾರೆ. ಪೊಲೀಸರಿಗೆ ಎಚ್ಚರಿಕೆ ಕೊಡ್ತೀನಿ, ನೀವು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ನೀವು ಸರ್ಕಾರಿ ನೌಕರರು, ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಇದೇ ಸಮಯದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಅಧಿಕಾರಕ್ಕಾಗಿ ಎಂತಹ ಕೆಲಸಕ್ಕೆ ಬೇಕಾದರೂ ಇಳಿಯುವ ಇಲ್ಲಿನ ಶಾಸಕರಿಗೆ, ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದಿದ್ದಾರೆ.