ಬಾಗಲಕೋಟೆ : ಸಿಡಿ ಲೇಡಿ ಆಡಿಯೋದಲ್ಲಿ ಡಿ ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾರೆ ಎಂಬುದನ್ನು ನೋಡಿದ್ದೇನೆ. ಇಷ್ಟಕ್ಕೆ ಡಿಕೆಶಿಯವರೇ ಸಪೋರ್ಟ್ ಮಾಡಿದ್ದಾರೆ ಅನ್ನೋದಕ್ಕೆ ಬರೋದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ವೇಳೆ ಮಾತನಾಡಿದ ಅವರು, ಯುವತಿ ಪರವಾಗಿ ಸದನದಲ್ಲಿ ಕಾಂಗ್ರೆಸ್ ಮುಖಂಡರೆಲ್ಲ ಮಾತನಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ,ರಮೇಶ್ ಕುಮಾರ್ ಹೆಸರನ್ನು ಸಹ ಯುವತಿ ಪ್ರಸ್ತಾಪಿಸಿದ್ದಾರೆ.
ಇದರಿಂದ ಕಾಂಗ್ರೆಸ್ ನಾಯಕರು ನನ್ನ ಪರವಾಗಿದ್ದಾರೆ ಅನ್ನೋ ಭರವಸೆ ಯುವತಿಗೆ ಬಂದಿರಬಹುದು. ಯುವತಿ ಆಡಿಯೋ ಕೇಳಿದ ತಕ್ಷಣ ಅವರೇ ಮಾಡಿದ್ದಾರೆ, ಹೇಳಿ ಮಾಡಿಸುತ್ತಿದ್ದಾರೆ ಎಂದು ಸುಮ್ಮನೆ ಹೇಳೋಕಾಗಲ್ಲ. ಸಿಡಿ ಪ್ರಕರಣದಲ್ಲಿ ನೊಂದ ಯುವತಿ ನಿನ್ನೆ ವಕೀಲರ ಮುಖಾಂತರ ದೂರು ಕೊಟ್ಟಿದ್ದಾಳೆ.
ಸರ್ಕಾರದಲ್ಲಿ ಸಿಎಂ, ಗೃಹ ಸಚಿವರು ಹಾಗೂ ನಾನು ಸಂಬಂಧಪಟ್ಟ ಇಲಾಖೆ ಸಚಿವೆಯಾಗಿ ಯಾವತ್ತು ಕೂಡ ಯುವತಿ ಪರ ಇದ್ದೇವೆ. ಮುಖ್ಯಮಂತ್ರಿಗಳು ಸಹ ಸಿರಿಯಸ್ಸಾಗಿ ಪ್ರಕರಣ ನೋಡುತ್ತಿದ್ದಾರೆ. ಯುವತಿ ತನಗೆ ರಕ್ಷಣೆ ಇಲ್ಲ, ಜೀವ ಬೆದರಿಕೆ ಇದೆ ಎಂಬ ಮಾಹಿತಿ ಇದ್ದರೆ ಯಾವುದೇ ಭಯಪಡಬೇಕಿಲ್ಲ.
ಯುವತಿಯಾಗಿ ಇಷ್ಟೊಂದು ಫೇಸ್ ಮಾಡ್ತಿದ್ದಾಳೆ. ಸಮಾಜಕ್ಕೆ ಸಂದೇಶ ಕೊಡುತ್ತಿದ್ದಾಳೆ. ಮುಖ್ಯಮಂತ್ರಿ, ಗೃಹಸಚಿವರು ಹಾಗೂ ನಾನು ಅವಳಿಗೆ ರಕ್ಷಣೆ ಕೊಡಲು ಹಿಂದೇಟು ಹಾಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.