ಬಾಗಲಕೋಟೆ: ಇಳಕಲ್ ನಗರದ ಜೋಶಿ ಗಲ್ಲಿಗೆ ಹೊಂದಿಕೊಂಡಂತೆ ಹಿರೇಹಳ್ಳದಲ್ಲಿ ಪೈಪ್‍ಲೈನ್ ಹಾಕಲು ಅಗೆಯಲಾದ ಗುಂಡಿಯಲ್ಲಿ ಚರಂಡಿಯ ಕೊಳಚೆ ನೀರು ಸಂಗ್ರಹಗೊಂಡಿದ್ದು, ಇಲ್ಲಿಯ ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.
ಇತ್ತೀಚೆಗೆ ಈ ಹಳ್ಳದಲ್ಲಿ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 300 ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಪೈಪ್‍ಲೈನ್‍ಗಾಗಿ ಹಳ್ಳದಲ್ಲಿ 10 ಅಡಿ ಆಳ, 200 ಮೀಟರ್ ಉದ್ದ ಗುಂಡಿ ಅಗೆಯಲಾಗಿದೆ.
ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಎಲ್ & ಟಿ ಕಂಪನಿ ಅಗೆದ ಗುಂಡಿಯಲ್ಲಿ ಪೈಪ್‍ಗಳನ್ನು ಅಳವಡಿಸಿ ಮುಚ್ಚಬೇಕಾಗಿತ್ತು. ಆದರೆ 1 ತಿಂಗಳಿಂದ ಅಗೆದ ಗುಂಡಿಯನ್ನು ಮುಚ್ಚದೇ ಹಾಗೆಯೇ ಬಿಟ್ಟಿರುವ ಕಾರಣ ಹಿರೇಹಳ್ಳದಲ್ಲಿ ಹರಿಯುತ್ತಿದ್ದ ನಗರದ ಗಟಾರ ಹಾಗೂ ಒಳಚರಂಡಿಯ ಕೊಳಚೆ ನೀರು ಈ ತಗ್ಗುಗಳಲ್ಲಿ ತುಂಬಿಕೊಂಡಿದೆ. ಮೊದಲೇ ಕೊಳಚೆ ಜತೆಗೆ ಅದು ತಗ್ಗುಗಳಲ್ಲಿ ಸಂಗ್ರಹಗೊಂಡಿದ್ದರಿಂದ ದುರ್ವಾಸನೆ ಹರಡಿದೆ. ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ.
ಪರಿಣಾಮವಾಗಿ ಜೋಶಿ ಗಲ್ಲಿಯ ಪೂರ್ವ ಭಾಗದ ನಿವಾಸಿಗಳಿಗೆ ಈಗ ದುರ್ವಾಸನೆ ಅಸಹನೀಯವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ದಾಳಿ ಮಾಡುತ್ತಿವೆ. ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ. ಈ ಬಗ್ಗೆ ನಗರಸಭೆ ಗಮನ ಹರಿಸಿ ಗುತ್ತಿಗೆದಾರರಿಂದ ಈ ಗುಂಡಿಗಳನ್ನು ಮುಚ್ಚಿಸಬೇಕು ಎಂದು ಜೋಶಿ ಗಲ್ಲಿ ನಾಗರಿಕ ವೇದಿಕೆಯ ಸಿ.ಪಿ.ರಾಮಗಿರಿಮಠ, ಎಂ.ವಿ. ಪಾಟೀಲ, ಪಿ.ಎಸ್. ಕಟಗೇರಿ ಮತ್ತಿತರರು ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಹೊಸ ಪೈಪ್‍ಲೈನ್ ಮೊದಲಿದ್ದ ಪೈಪ್‍ಲೈನ್‍ಗಳಿಂದ ಇನ್ನಷ್ಟು ಅಂತರದಲ್ಲಿ ಹಾಕಲು ಸೂಚಿಸಲಾಗಿದೆ. ಈಗ ತಗ್ಗಿನಲ್ಲಿ ಸಂಗ್ರಹಗೊಂಡಿರುವ ನೀರನ್ನು ಕೂಡಲೇ ಖಾಲಿ ಮಾಡಲು ಅಗತ್ಯ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.