ಬಾಗಲಕೋಟೆ : ನಗರದ ವಿದ್ಯಾರ್ಥಿಯೋರ್ವ ಲಾಕ್ಡೌನ್ ಸಮಯಲ್ಲಿ ಒಂದು ಹೊಸ ಪ್ರಾತ್ಯಕ್ಷಿಕೆ 'ಸೆನ್ಸರ್ ಆಧಾರಿತ ಸ್ಯಾನಿಟೈಸರ್' ಎಂಬ ಒಂದು ವಿನೂತನ ಯಂತ್ರವನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾನೆ.
ಇಲ್ಲಿನ ಬಸವೇಶ್ವರ ಎಂಜನಿಯರಿಂಗ್ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದಲ್ಲಿ ಓದುವ ಕುಮಾರ್ ಅಭಿಷೇಕ ಹಿಪ್ಪರಗಿ ಎಂಬ ವಿದ್ಯಾರ್ಥಿ ಮನೆಯಲ್ಲಿದ್ದುಕೊಂಡು ಲಾಕ್ಡೌನ್ ಸಮಯವನ್ನು ವ್ಯರ್ಥ ಮಾಡದೇ ಸೃಜನಾತ್ಮಕವಾಗಿ ಯೋಚಿಸಿ ಈ ವಿನೂತನ ಯಂತ್ರವನ್ನು ಸಿದ್ಧಪಡಿದ್ದು ಸ್ಥಳೀಯರು ಸೇರಿ ಆತನ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯವಾಗಿ ಸಿಗುವ ಇಲೆಕ್ಟ್ರಾನಿಕ್ ಉಪಕರಣ ಬಳಸಿ ಸಿದ್ಧಪಡಿಸಿದ ಈ ಯಂತ್ರದಲ್ಲಿ ನೇರವಾಗಿ ಕೈಯನ್ನು ಸೆನ್ಸರ್ ಅಳವಡಿಸಿದ ನಲ್ಲಿಯ ಕೆಳಗೆ ಹಿಡಿದರೆ ಸಾಕು ತಾನಾಗಿಯೇ ಸ್ಯಾನಿಟೈಸರ್ ಕೈಮೇಲೆ ಸ್ಪ್ರೇ ಆಗುತ್ತದೆ. ಕೇವಲ 2 ಸಾವಿರ ರೂ.ನಲ್ಲಿ ಸಿಗಬಹುದಾದ ಯಂತ್ರ ಇದಾಗಿದೆ. ಸಾಮಾನ್ಯವಾಗಿ ಕಚೇರಿಗಳಲ್ಲಿ ಬಳಸುತ್ತಿರುವ ಬಾಟಲಿಯಲ್ಲಿ ಸ್ಯಾನಿಟೈಸರ್ ಪ್ರೆಸ್ ಮಾಡಿ ತೆಗೆದುಕೊಳ್ಳುವುದರಿಂದ ಅಸುರಕ್ಷತೆಯಿಂದ ಸೋಂಕು ತಗುಲಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ವಿದ್ಯಾರ್ಥಿಯು ಈ ಯಂತ್ರವನ್ನು ನಿರ್ಮಿಸಿದ್ದಾನೆ.
ವಿದ್ಯಾರ್ಥಿಯ ಸೃಜನಾತ್ಮಕತೆ ಮತ್ತು ಸಾಮಾಜಿಕ ಕಾಳಜಿಯನ್ನು ಗುರುತಿಸಿ ಶಾಸಕ ಡಾ. ವೀರಣ್ಣ ಚರಂತಿಮಠ, ಬಿವ್ಹಿವ್ಹಿಎಸ್ ತಾಂತ್ರಿಕ ನಿರ್ದೇಶಕ ಡಾ. ಆರ್ ಎನ್ ಹೆರಕಲ್, ಪ್ರಾಚಾರ್ಯ ಡಾ. ಎಸ್ ಎಸ್ ಇಂಜಗನೇರಿ ಮತ್ತು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್ ಜಂಗಮಶೆಟ್ಟಿ ಅವರು ವಿದ್ಯಾರ್ಥಿಯ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.